More

    ಗಣಪನ ಆಗಮನಕ್ಕೆ ಕಾತರ!

    ಬೆಳಗಾವಿ: ಗಡಿನಾಡು ಬೆಳಗಾವಿಎರಡು ವರ್ಷಗಳ ಬಳಿಕ ಅದ್ದೂರಿ ಗಣೇಶೋತ್ಸವಕ್ಕೆ ಸಜ್ಜಾಗುತ್ತಿದೆ. ನಗರದಲ್ಲಿ 290 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಾರ್ವಜನಿಕ ಮಂಡಳಗಳು ಸಿದ್ಧತೆ ಆರಂಭಿಸಿವೆ. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಅದ್ದೂರಿ ಗಣೇಶೋತ್ಸವಕ್ಕೆ ನಿರ್ಬಂಧ ಹಾಕಲಾಗಿತ್ತು. ಆದರೆ, ಈ ಬಾರಿ ಸರ್ಕಾರವು ನಿರ್ಬಂಧ ತೆಗೆದಿರುವುದರಿಂದ ಗಣೇಶೋತ್ಸವ ಕಳೆಗಟ್ಟಿದೆ. ಆಗಸ್ಟ್ ತಿಂಗಳಾಂತ್ಯದಲ್ಲಿ ಗಣೇಶೋತ್ಸವ ಇರುವುದರಿಂದ ಸಾರ್ವಜನಿಕ ಗಣಪತಿ ಪ್ರತಿಷ್ಠಾನ ತಯಾರಿ ಭರದಿಂದ ನಡೆದಿದೆ. ಮನೆ ಮನೆಗಳಲ್ಲಿಯೂ ತಯಾರಕರು ಪುಟ್ಟ-ಪುಟ್ಟ ಗಣೇಶನ ಮೂರ್ತಿ ತಯಾರಿಸಿ ಬಣ್ಣ ಬಳಿದು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.

    ಮಹಾರಾಷ್ಟ್ರದ ಮುಂಬೈ, ಪುಣೆ ಬಿಟ್ಟರೆ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ಬೆಳಗಾವಿಯಲ್ಲೇ. ಸುಮಾರು 11 ದಿನಗಳ ಉತ್ಸವದಲ್ಲಿ ಪಾರಂಪರಿಕ ವೈಭವ, ವಿಜೃಂಭಣೆಯಿಂದ ಸಾಂಸ್ಕೃತಿಕ ಕಲಾ ಉತ್ಸವಗಳ ಸಹಿತ ಗಣೇಶೋತ್ಸವ ನಡೆಯಲಿದೆ. ನಗರದ ವಿವಿಧ ಬಡಾವಣೆಗಳಲ್ಲಿ 290ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಉತ್ಸವ ನೋಡಲು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಸಹಸ್ರಾರು ಭಕ್ತರು ಬರುತ್ತಾರೆ. ನೆರೆಯ ಮುಂಬೈನಿಂದ ಸೌಂಡ್ ಸಿಸ್ಟ್‌ಂ ತಂಡಗಳು ಆಗಮಿಸುತ್ತಿವೆ.
    ಅಂಗಡಿಕಾರರು ಗಣಪತಿ ಹಬ್ಬ ಎದುರು ನೋಡುತ್ತಿದ್ದಾರೆ. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ವಿಜೃಂಭಣೆ ಇರಲಿಲ್ಲ. ಈ ವರ್ಷ ಅದ್ದೂರಿಯಾಗಲಿದೆ ಎಂದು ಸಾರ್ವಜನಿಕ ಗಣೇಶ ಮಂಡಳಗಳು, ಮೂರ್ತಿಕಾರರು ತಿಳಿಸಿದ್ದಾರೆ. ಪ್ರತಿ ಬೀದಿಗಳಲ್ಲಿ ಬಗೆಬಗೆಯ ವಿನ್ಯಾಸದ ಮಂಟಪಗಳು ತಲೆ ಎತ್ತಿವೆ. ಪಿಒಪಿ ಗಣಪತಿ ಅಬ್ಬರದ ಮಧ್ಯೆಯೂ ಕೆಲವು ಮಂಡಳಗಳು ಪರಿಸರಸ್ನೇಹಿ ಮೂರ್ತಿ ತಯಾರಿಸಿ, ಪ್ರತಿಷ್ಠಾಪಿಸಲು ಸಜ್ಜಾಗಿವೆ. ವಿಸರ್ಜನಾ ಮೆರವಣಿಗೆಯ ರಂಗು ಹೆಚ್ಚಿಸುವ ನಿಟ್ಟಿನಲ್ಲೂ ಸಿದ್ಧತೆಗ್ಳು ಆರಂಭಗೊಂಡಿವೆ.

    ದೇಶದ ಗಮನ ಸೆಳೆದ ಬೆಳಗಾವಿ

    1905ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಬೆಳಗಾವಿ ನಗರಕ್ಕೆ ಬಂದು ಗಣೇಶೋತ್ಸವಕ್ಕೆ ಚಾಲನೆ ಕೊಟ್ಟಿದ್ದರು. ಅಂದು ರವಿವಾರ ಪೇಟೆಯಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಉತ್ಸವ ಇಂದು ಬೃಹತ್ ರೂಪ ಪಡೆದಿದ್ದು, ಇಡಿ ದೇಶದಲ್ಲೇ ಗಮನ ಸೆಳೆಯುತ್ತಿದೆ. ಕನ್ನಡಿಗರು, ಮರಾಠಿಗರು ಸೇರಿದಂತೆ ಎಲ್ಲ ವರ್ಗದವರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವಕ್ಕೆ ಚಾಲನೆ ಕೊಟ್ಟಿದ್ದರು.

    ಮಹಾನಗರದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 280ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆ ಆಗಲಿವೆ. ಮೆರವಣಿಗೆ ಮಾರ್ಗಗಳನ್ನು ಸುಧಾರಣೆ ಮಾಡಲಾಗುತ್ತಿದೆ.
    | ಡಾ.ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts