More

    ಗಡಿ ಭಾಗಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿ

    ಬೆಳಗಾವಿ: ಗಡಿ ಭಾಗದ ಸಾಹಿತಿಗಳು, ಕಲಾವಿದರು, ಕಲಾ ತಂಡಗಳು, ಶಿಕ್ಷಣ ತಜ್ಞರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವುದು ಹಾಗೂ ಸಂಘ-ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ಕರ್ನಾಟಕದ ಸಾಹಿತಿಗಳು, ರಂಗ- ಚಿಂತಕರು, ಶಿಕ್ಷಣ ತಜ್ಞರು, ಕಲಾವಿದರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಅನೇಕ ವರ್ಷಗಳಿಂದ ಕಿತ್ತೂರು ಕರ್ನಾಟಕದ ಸಾಹಿತಿಗಳು, ಶಿಕ್ಷಣ ತಜ್ಞರು, ಕಲಾವಿದರು ಹಾಗೂ ಚಿಂತಕರ ವಲಯಕ್ಕೆ ಅನ್ಯಾಯವಾಗುತ್ತಿದೆ. ಪ್ರಾಧಿಕಾರಗಳಲ್ಲಿ ಈ ಭಾಗದವರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು ಹಾಗೂ ಕಲಾವಿದರ ಅನುಭವ ಪರಿಗಣಿಸದೆ ಕೇವಲ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಸೌಲಭ್ಯಗಳಿಗಾಗಿ ಪರಿಗಣಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಾಗಿದ್ದರೂ ಸಾಹಿತ್ಯ ಕ್ಷೇತ್ರಕ್ಕೆ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ. ಅಲ್ಲದೆ, ಪ್ರತಿವರ್ಷ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಹಂಚಿಕೆಯಲ್ಲಿ ಇಲ್ಲಿನ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕ ಭಾಗದ ಪ್ರದೇಶಗಳ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಲಾಗಿದೆ. ಆದರೆ, ರಾಜ್ಯಮಟ್ಟದ ಕಚೇರಿ, ಸಚಿವಾಲಯ ಇಲ್ಲಿಗೆ ಸ್ಥಳಾಂತರಗೊಂಡಿಲ್ಲ. ಸರ್ಕಾರ ಪ್ರತಿವರ್ಷ 30 ದಿನ ಅಧಿವೇಶನ ನಡೆಸುವ ಬದಲು ಕೇವಲ 10 ದಿನ ಅಧಿವೇಶನ ನಡೆಸಿ ಕೋಟ್ಯಂತರ ರೂ.
    ಅನುದಾನ ಹಾಳು ಮಾಡುತ್ತಿದೆ. ಅಧಿವೇಶನದಲ್ಲಿ ಶಾಸಕರ ಗೈರು ಹಾಜರಾತಿ ಎದ್ದು ಕಾಣುತ್ತಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಕೂಡಲೇ ಶಾಸಕರ ಭವನ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ಬೆಳಗಾವಿಯಲ್ಲಿ ವಿವಿಧ ಉದ್ದಿಮೆ ಆರಂಭಿಸಿ, ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. 1940ರ ಕಾಲಘಟ್ಟದಲ್ಲಿ ಮರಾಠಿಗರ ನಡುವೆ ನೆಲೆನಿಂತು ‘ಹಚ್ಚೇವು ಕನ್ನಡದ ದೀಪ’ ಎಂದು ಹಾಡಿದ ವಿಶ್ವಕವಿ ಡಾ. ಡಿ.ಎಸ್. ಕರ್ಕಿ ಹಾಗೂ ‘ಬನ್ನಿ ಓ ಬಾಂಧವರೇ, ನಮ್ಮ ಬೆಳಗಾವಿಗೆ ಕನ್ನಡಿಗರ ಭದ್ರಕೋಟೆಗೆ’ ಎಂದು ಹಾಡಿ ಕನ್ನಡ ಪ್ರಜ್ಞೆ ಹುಟ್ಟುಹಾಕಿದ ಕವಿ ಎಸ್.ಡಿ. ಇಂಚಲರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಹಾಗೂ ಅಮಟೂರ ಬಾಳಪ್ಪ ಉತ್ಸವಗಳನ್ನು ನಡೆಸಬೇಕು ಎಂದು ಕೋರಿದರು. ಸಾಹಿತಿ ಬಿ.ಎಸ್. ಗವಿಮಠ, ಯ.ರು. ಪಾಟೀಲ, ಏಣಗಿ ಸುಭಾಷ, ಬಸವರಾಜ ಗಾರ್ಗಿ, ಡಾ.ಮಹೇಶ ಗುರನಗೌಡರ, ಎಂ.ಜೆ. ಪಾಟೀಲ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts