More

    ಗಡಿ ಗೊಂದಲ ಶೀಘ್ರ ನಿವಾರಣೆ

    ಗಡಿ ಗೊಂದಲ ಶೀಘ್ರ ನಿವಾರಣೆ

    ಜಯಪುರ (ಕೊಪ್ಪ ತಾ.): ಕೊಪ್ಪ ತಾಲೂಕು ಹೆಗ್ಗಾರು ಸಮೀಪದ ಬೈಸಿಕಲ್ಲು, ಬಸವನಕಲ್ಲು ಮತ್ತಿತರೆ ಗ್ರಾಮಸ್ಥರಿಗೆ ಸರ್ಕಾರಿ ಸವಲತ್ತು ಪಡೆಯಲು ಉಂಟಾಗಿರುವ ಕೊಪ್ಪ ಹಾಗೂ ಶೃಂಗೇರಿ ತಾಲೂಕು ಗಡಿಗೊಂದಲ ನಿವಾರಣೆ ಉದ್ದೇಶದಿಂದ ಬುಧವಾರ ಜಯಪುರ ನಕ್ಸಲ್ ನಿಗ್ರಹ ಪಡೆಯಿಂದ ಹೆಗ್ಗಾರುಕುಡಿಗೆ ದುರ್ಗಾಪರಮೇಶ್ವರಿ ದೇಗುಲದ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಯಿತು.

    ಜಯಪುರ ನಕ್ಸಲ್ ನಿಗ್ರಹ ಪಡೆ ಪೊಲೀಸ್ ಇನ್ಸ್​ಪೆಕ್ಟರ್ ಗುರುಪ್ರಸಾದ್ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರಿ ಸವಲತ್ತು ಸಿಗಬೇಕು. ಹೆಗ್ಗಾರು ಗ್ರಾಮದ ಬೈಸಿಕಲ್ಲು, ಬಸವನಕಲ್ಲು ನಿವಾಸಿಗಳು ತಮ್ಮ ಮನೆಗಳ ಸಕ್ರಮಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಸಿ ಅಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಬಯಸಿದ್ದರು. ಆಗ ಎರಡೂ ತಾಲೂಕು ಗಡಿ ಗೊಂದಲ ಉಂಟಾಗಿತ್ತು. ಸ್ಥಳೀಯರು ನಮ್ಮ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಅದಕ್ಕಾಗಿ ನಾವು ಸರ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕರೆಸಿದ್ದೇವೆ. ಸರ್ವೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗೊಂದಲ ನಿವಾರಿಸುತ್ತಾರೆ. ಎಎನ್​ಎಫ್ ಮನವಿಗೆ ಸರ್ವೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ ಎಂದರು.

    ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂಜಯ್ ಮಾತನಾಡಿ, ಎಎನ್​ಎಫ್ ಅಧಿಕಾರಿಗಳಿಂದ ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದೇವೆ. ಜಿಪಿಎಸ್ ಯಂತ್ರ ಹಾಗೂ ಮ್ಯಾಪ್​ಗಳೊಂದಿಗೆ ಕೊಪ್ಪ ಹಾಗೂ ಶೃಂಗೇರಿ ತಾಲೂಕು ಸರ್ವೆ ಅಧಿಕಾರಿಗಳು ಜಂಟಿ ಸರ್ವೆ ನಡೆಸುತ್ತಾರೆ. ನಂತರ ಸ್ಪಷ್ಟವಾಗಿ ಎರಡೂ ತಾಲೂಕಿನ ಗಡಿ ಗುರುತಿಸುತ್ತಾರೆ. ನಂತರ ಅವರು ಸರ್ಕಾರಿ ಸವಲತ್ತುಗಳಿಗೆ ಅರ್ಜಿ ಸಲ್ಲಿಸಬಹುದು ಎಂದರು.

    ಸಭೆ ನಂತರ ಸರ್ವೆ ಅಧಿಕಾರಿಗಳು ಬೈಸಿಗದ್ದೆ, ಬಸವನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಜಿಪಿಎಸ್​ಯುಂತ್ರ ಹಾಗೂ ಮ್ಯಾಪ್ ಸಹಾಯದಿಂದ ಸ್ಥಳ ಪರಿಶೀಲಿಸಿದರು. ಸ್ವೀಕರಿಸಿದ್ದರಲ್ಲಿ ಉಳಿದ 6 ಅರ್ಜಿದಾರರ ಜಾಗಕ್ಕೆ ಇನ್ನೊಂದು ವಾರದಲ್ಲಿ ಭೇಟಿ ನೀಡಿ, ಸರ್ವೆ ಮಾಡಿ ಗೊಂದಲ ನಿವಾರಿಸಲಾಗುವುದು ಎಂದು ಹೇಳಿದರು.

    ಸ್ಥಳೀಯ ನಿವಾಸಿ ಚಂದ್ರಶೇಖರ್ ಮಾತನಾಡಿ, ಸ್ಥಳೀಯರು ತಾಲೂಕು ಗಡಿ ಗೊಂದಲದಿಂದ ಆತಂಕಕ್ಕೆ ಒಳಗಾಗಿದ್ದರು. ತಮ್ಮ ಪೂರ್ವಿಕರು ಜೀವನ ನಡೆಸಿ ಬಂದ ಸ್ಥಳ ಈಗ ಬೇರೊಂದು ತಾಲೂಕಿಗೆ ಸೇರುತ್ತದೆ ಎಂದಾಗ ಆತಂಕ ಉಂಟಾಗಿದೆ. ಎಲ್ಲ ಸರ್ಕಾರಿ ದಾಖಲೆಗಳಲ್ಲಿ ವಿಳಾಸ ಹಾಗೂ ತಾಲೂಕನ್ನು ತಿದ್ದುಪಡಿ ಮಾಡಿಸಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು. ಜಯಪುರದ ನಕ್ಸಲ್ ನಿಗ್ರಹ ಪಡೆ ಬಹಳ ಕಡಿಮೆ ಸಮಯದಲ್ಲಿ ಈ ಸಮಸ್ಯೆ ಮನಗಂಡು ಜಿಲ್ಲಾ ಮಟ್ಟದ ಸರ್ವೆ ಅಧಿಕಾರಿಗಳನ್ನು ಕರೆಸಿ, ಸಾರ್ವಜನಿಕರು ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಎಂದು ಹೇಳಿದರು.

    ಅಗಳಗಂಡಿ ಪಿಡಿಒ ಪ್ರದೀಪ್ ಮಾತನಾಡಿ, ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಗ್ರಾಪಂ ಮುಖೇನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಎಎನ್​ಎಫ್ ಪಿಎಸ್​ಐ ಅಹಮದ್ ಸಂಗಾಪುರ್, ಅಗಳಗಂಡಿ ಗ್ರಾಮ ಲೆಕ್ಕಿಗರಾದ ಪಂಪನಾ, ಸರ್ವೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts