More

    ಗಡಿಯಲ್ಲಿ ಚೆಕ್​ಪೋಸ್ಟ್ ಬಿಗಿಗೊಳಿಸಲು ಸೂಚನೆ

    ಹಾವೇರಿ: ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಸಂಜೆ ವಿಡಿಯೋ ಕಾನ್ಪ್ಪೆನ್ಸ್ ನಡೆಸಿದರು.

    ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದ ಸಚಿವರು, ಮುಂದಿನ ದಿನಗಳಲ್ಲಿ ಕರೊನಾ ಸೋಂಕು ಕಾಣದಂತೆ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

    ಹೊರಜಿಲ್ಲೆಗಳನ್ನು ಸಂರ್ಪಸುವ ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ. ಸರಕು ಸಾಗಣೆ ಹೊರತುಪಡಿಸಿ ಹೊರ ಜಿಲ್ಲೆಯಿಂದ ಪ್ರಯಾಣಿಕರು ಕಾರಣವಿಲ್ಲದೆ ಪ್ರವೇಶಿಸುವುದನ್ನು ನಿರ್ಬಂಧಿಸಬೇಕು. ಲಾಕ್​ಡೌನ್​ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ. ಗಡಿಭಾಗದ ಎಲ್ಲ ಚೆಕ್​ಪೋಸ್ಟ್​ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದರು.

    ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವವರ ಮೇಲೆ ತೀವ್ರ ನಿಗಾವಹಿಸಿ ದೆಹಲಿ ಸೇರಿದಂತೆ ರಾಜ್ಯದ ವಿವಿಧ ಭಾಗ, ವಿದೇಶದಿಂದ ಬಂದವರ ಆರೋಗ್ಯ ತಪಾಸಣೆಯನ್ನು ದಿನಕ್ಕೆರಡು ಬಾರಿ ಕೈಗೊಳ್ಳಿ. ಮಾಹಿತಿ ನೀಡದೇ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಹೊರ ರಾಜ್ಯ ಹಾಗೂ ವಿದೇಶದಿಂದ ಬಂದವರ ಮಾಹಿತಿ ಕಲೆ ಹಾಕಲು ಕ್ರಮವಹಿಸಿ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಕರೊನಾ ಸೋಂಕು ಪತ್ತೆಯಾಗಬಾರದು. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.

    ಜಿಲ್ಲೆಯಲ್ಲಿ ಕರೊನಾ ಪತ್ತೆಯಾಗದ ಕಾರಣ ವೈದ್ಯಕೀಯ, ಅರೇವೈದ್ಯಕೀಯ ಸಿಬ್ಬಂದಿಗೆ ಸದ್ಯದ ಸ್ಥಿತಿಯಲ್ಲಿ ಹೆಚ್ಚು ಕಾರ್ಯ ಒತ್ತಡ ಇರುವುದಿಲ್ಲ. ಈಗಿನಿಂದಲೇ ಜಿಲ್ಲೆಯಲ್ಲಿ ಮನೆಮನೆಗೆ ಭೇಟಿ ನೀಡಿ ಸಾಮಾನ್ಯ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿರುವ ವಿಶೇಷ ವಾರ್ಡ್​ಗಳಿಗೆ ಕೇಂದ್ರೀಕೃತ ವೆಂಟಿಲೇಷನ್ ವ್ಯವಸ್ಥೆಯನ್ನು ಕೈಗೊಳ್ಳಿ. ಕನಿಷ್ಠ ಹತ್ತು ಹಾಸಿಗೆಗಳಿಗೆ ಏಕ ವ್ಯವಸ್ಥೆಯಲ್ಲಿ ಆಕ್ಸಿಜನ್ ಪೂರೈಕೆಯಾಗಬೇಕು. ಇದಕ್ಕೆ ಬೇಕಾದ ವೆಚ್ಚ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಎಸ್​ಡಿಆರ್​ಎಫ್ ಅನುದಾನ ಬಳಸಿಕೊಳ್ಳಿ ಎಂದರು.

    ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ವಿಶೇಷವಾಗಿ ಯೂರಿಯಾ ಗೊಬ್ಬರದ ಅಭಾವವಾಗದಂತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಬೀಜ, ಗೊಬ್ಬರಗಳ ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರು ಕರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಗಳಾದ ಡಾ. ದಿಲೀಪ ಶಶಿ, ಅನ್ನಪೂರ್ಣ ಮುದಕಮ್ಮನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ, ಆಹಾರ ಮತ್ತು ನಾಗಕರ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts