More

    ಖಾಸಗಿ ಆಸ್ಪತ್ರೆಗಳಿಂದ ಅಸಹಕಾರ

    ಶಿರಸಿ: ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ನಿತ್ಯದ ವರದಿ ನೀಡಲು ನಿರಾಕರಿಸುತ್ತಿದ್ದು, ಇದು ಸರ್ಕಾರದ ನಿಯಮಾವಳಿ ವಿರುದ್ಧವಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಯವರು ಆಡಳಿತಕ್ಕೆ ಎಲ್ಲ ರೀತಿಯ ಸಹಕಾರ ನೀಡದಿದ್ದರೆ ಸೂಕ್ತ ಕ್ರಮವಹಿಸುವುದಾಗಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಎಚ್ಚರಿಕೆ ನೀಡಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ಖಾಸಗಿ ಆಸ್ಪತ್ರೆಗೂ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಆಯಾ ಆಸ್ಪತ್ರೆಯಲ್ಲಿರುವ ಆಮ್ಲಜನಕದ ಪ್ರಮಾಣ, ಲಸಿಕೆ, ಗುಣಮುಖರಾದ ಸೋಂಕಿತರು, ಸಾವಿಗೀಡಾದವರು ಸೇರಿದಂತೆ ಕೋವಿಡ್ ಸಂಬಂಧ ನಿತ್ಯದ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಸೂಚಿಸಲಾಗಿದೆ. ಆದರೆ, ನಗರದಲ್ಲಿ ಕೋವಿಡ್ ಸಂಬಂಧ ಚಿಕಿತ್ಸೆ ನೀಡುತ್ತಿರುವ ಕೆಲವು ಆಸ್ಪತ್ರೆಗಳು ಮಾಹಿತಿ ನೀಡಲು ನಿರಾಕರಿಸುತ್ತಿವೆ. ಇದರಿಂದ ಸರ್ಕಾರಿ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೊನೆಯ ಕ್ಷಣದಲ್ಲಿ ಆಮ್ಲಜನಕ, ಲಸಿಕೆಗಳ ಬೇಡಿಕೆ ನೀಡಿದರೆ ಪೂರೈಸಲು ಕಷ್ಟವಾಗುತ್ತದೆ. ಹೀಗಾಗಿ ತಕ್ಷಣದಿಂದಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ತಪ್ಪಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.
    ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯ ಮೀರಿ ಕೋವಿಡ್ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಇದು ಕೂಡ ಸೌಲಭ್ಯ ಕಲ್ಪಿಸಲು ತೊಡಕಾಗುತ್ತಿದೆ. 24 ಬೆಡ್ ಅವಕಾಶ ನೀಡರುವ ಆಸ್ಪತ್ರೆಯೊಂದರಲ್ಲಿ 50ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಕೋವಿಡ್ ಕಾನೂನಿನ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಎಚ್ಚರಿಕೆ ನೀಡಲಾಗಿದೆ ಎಂದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಕ್ಕೆ ಶೇ.50ರಷ್ಟು ಬೆಡ್ ಮೀಸಲು ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಶಿರಸಿಯಲ್ಲಿ ಈ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಜತೆ, ಶಿರಸಿ ತಾಲೂಕಿನ ರೋಗಿಗಳಿಗೆ ಅವಕಾಶ ನೀಡದೆ ಹೊರ ಊರುಗಳ ರೋಗಿಗಳಿಗೇ ಅವಕಾಶ ನೀಡಲಾಗಿದೆ. ಇದು ಕೂಡ ಕಾನೂನು ಮೀರಿದ ನಡೆಯಾಗಿದೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶನ್ನು ಆಲಿಸಬೇಕು. ಕರೊನಾ ನಿಮೂಲನೆಯ ಹೋರಾಟದಲ್ಲಿ ಆಡಳಿತಕ್ಕೆ ಸಹಕಾರ ನೀಡಬೇಕು ಎಂದರು.
    ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಿಗೆ ನಿಯಮಾವಳಿಯಂತೆ ನಡೆಯುವಂತೆ ಹೇಳಿದರೆ, ಕರೊನಾ ರೋಗಿಗಳಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನೇ ಬಂದ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
    ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ, ಪೌರಾಯುಕ್ತ ರಮೇಶ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts