More

    ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ – ಎಂ.ಜಿ. ಹಿರೇಮಠ

    ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಸೋಂಕಿತರಿಗೆ ಸರ್ಕಾರದ ನಿಯಮದ ಪ್ರಕಾರ ಉಚಿತವಾಗಿ
    ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಎಂ.ಜಿ. ಹಿರೇಮಠ ಹೇಳಿದ್ದಾರೆ.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತರು ಬಿಮ್ಸ್ನಲ್ಲೇ ದಾಖಲಾಗಬೇಕು ಎಂದು ಕಾಯುವ ಅಗತ್ಯವಿಲ್ಲ. ಹಳ್ಳಿಗಳಲ್ಲೂ ಕೋವಿಡ್ ಟೆಸ್ಟ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿರುವವರಿಗೆ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡುತ್ತಿದ್ದೇವೆ. ಈಗಾಗಲೇ 50 ಸಾವಿರ ಕಿಟ್ ಬಂದಿವೆ.

    ಕರೊನಾ ಪರೀಕ್ಷೆಯಿಂದ ಹಳ್ಳಿಗಳಲ್ಲಿ ಸೋಂಕು ತಡೆಯಲು ಅನುಕೂಲವಾಗಿದೆ. ಸೋಂಕಿತರು ಪತ್ತೆಯಾದರೆ ಸಮೀಪದ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿ ಚಿಕಿತ್ಸೆ ನೀಡುತ್ತೇವೆ. ಇದರಿಂದ ಸೋಂಕು ಹರಡುವಿಕೆ ತಡೆಯುವುದು ಸುಲಭವಾಗುತ್ತದೆ. ಜಿಲ್ಲೆಯಲ್ಲಿ 1,800ಕ್ಕೂ ಹೆಚ್ಚು ಹಳ್ಳಿಗಳಿದ್ದು, ಎಲ್ಲೆಡೆ ಕೋವಿಡ್ ಪರೀಕ್ಷೆ ಆಗಬೇಕು. 400 ಹಳ್ಳಿಗಳು ಜಿಲ್ಲಾಡಳಿತದ ಹಿಡಿತದಲ್ಲಿದ್ದು, ಇಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 30 ಆಕ್ಸಿಜನ್ ಬೆಡ್‌ಗಳಿವೆ. ಚಿಕ್ಕೋಡಿಯಲ್ಲಿ 10 ಬೆಡ್ ಹಾಗೂ ಬೆಳಗಾವಿಯಲ್ಲೂ 30 ಬೆಡ್ ಖಾಲಿ ಇವೆ. ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿದೆ. ಸರ್ಕಾರದ ಕೋಟಾದಡಿ ಅಲ್ಲೂ ಶೇ.50 ಬೆಡ್ ಮೀಸಲಾಗಿವೆ. ಈ ಬಗ್ಗೆ ವಾರ್‌ರೂಂ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts