More

    ಖಾತೆಗಾಗಿ ನಗರಸಭೆ ಎದುರು ಧರಣಿ; 3 ತಿಂಗಳಿಂದ ಸತಾಯಿಸುತ್ತಿದ್ದ ಅಧಿಕಾರಿಗಳು

    ತಿಪಟೂರು: 3 ತಿಂಗಳಿಂದ ಖಾತೆ ನೀಡಲು ಸತಾಯಿಸುತ್ತಿದ್ದ ನಗರಸಭೆ ಕಾರ್ಯವೈಖರಿ ಖಂಡಿಸಿ ಇಡೀ ಕುಟುಂಬ ಸೋಮವಾರ ನಗರಸಭೆ ಆವರಣದಲ್ಲಿ ಧರಣಿ ನಡೆಸಿತು.

    ನಗರದ ಹಳೇಪಾಳ್ಯ ಬಡಾವಣೆಯ ಆರ್.ಕೆಂಚರಾಯಪ್ಪ ಪುತ್ರ ಎಚ್.ಕೆ.ರಮೇಶ್ ತಮ್ಮ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ಸೋಮವಾರ ಬೆಳಗ್ಗೆ ನಗರಸಭೆ ಕಚೇರಿ ಆವರಣದಲ್ಲಿ ಶಾಮಿಯಾನ ಹಾಕಿಸಿಕೊಂಡು ಖಾತೆ ಪತ್ರ ನೀಡುವಂತೆ ಆಗ್ರಹಿಸಿ ಪಟ್ಟು ಹಿಡಿದು ಧರಣಿ ನಡೆಸಿದರು.

    ಇದೇ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ 22ನೇ ವಾರ್ಡ್ ಸದಸ್ಯೆ ಮುಸ್ತಾಕ್ ಅಹ್ಮದ್, ತಾನು ಕೂಡ ಖಾತೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಕೇಳಿದರೆ ಈಗ ಬನ್ನಿ, ಆಗ ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ನಗರಸಭೆ ಸಿಬ್ಬಂದಿ ಹೀಗೇ ಮಾಡಿದರೆ ವಿಷ ಕುಡಿಯುವುದೊಂದೇ ಬಾಕಿ ಎಂದು ಅಸಮಾಧಾನ ಹೊರಹಾಕಿದರು.

    ಸ್ಥಳದಿಂದ ಕದಲಿಲ್ಲ: ಬ್ಯಾಂಕಿನಲ್ಲಿ ನಿವೇಶನಗಳ ಪತ್ರವನ್ನು ಅಡವಿಟ್ಟು ಸಾಲ ಪಡೆಯಲು ನಗರಸಭೆಯಲ್ಲಿ ಸಕಾಲದ ಅಡಿಯಲ್ಲಿ ಖಾತೆಗಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ನಿಂದ 1.5 ಕೋಟಿ ರೂಪಾಯಿ ಸಾಲ ಮಂಜೂರಾಗಿತ್ತು. ಆದರೆ, 3 ತಿಂಗಳಾದರೂ ನಗರಸಭೆ ದಾಖಲೆಗಳು ಒದಗಿಸಲು ಸಾಧ್ಯವಾಗದ ಕಾರಣ ಬ್ಯಾಂಕ್‌ನಿಂದ ಸಾಲ ಪಡೆದು ಹೊಸ ಯೋಜನೆ ಪ್ರಾರಂಭಿಸುವ ಉದ್ದೇಶ ಈಡೇರಲಿಲ್ಲ. ಹಾಗಾಗಿ, ರಮೇಶ್ ಕುಟುಂಬ ಸಮೇತ ಧರಣಿ ಕುಳಿತರಲ್ಲದೆ, ಸ್ಥಳದಿಂದ ಬಿಟ್ಟು ಕದಲಿಲ್ಲ.

    ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷ ಪಿ.ಜೆ.ರಾಮ ಮೋಹನ್ ಹಾಗೂ ಆಯುಕ್ತ ಉಮಾಕಾಂತ್, ಎಚ್.ಕೆ.ರಮೇಶ್‌ಗೆ ಸಂಬಂಧಿಸಿದ ಸ್ವತ್ತಿನ ಖಾತೆ ಮಾಡಲು ೆ.15 ರಂದು ಸಹಿ ಹಾಕಲಾಗಿದ್ದು ಸ್ಥಳ, ನಿವೇಶನದ ಪರಿಶೀಲನೆ ಮತ್ತು ನಕಾಶೆ ಇಲ್ಲದೇ ಖಾತೆ ಮಾಡಲು ಸಾಧ್ಯವಿಲ್ಲದ ಕಾರಣ ಖಾತೆ ಮಾಡಿಕೊಡುವಲ್ಲಿ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಖಾತೆ ಪತ್ರ ನೀಡಿದರು. ಅಂತಿಮವಾಗಿ ಪ್ರತಿಭಟನೆ ಕೈಬಿಟ್ಟರು.

    4 ತಿಂಗಳಿಂದ ದಾಖಲೆ ಪ್ರಮಾಣದಲ್ಲಿ 2,850 ಇ-ಖಾತ ನೀಡಲಾಗಿದೆ. ಅಶಕ್ತರ ಮನೆ ಬಾಗಿಲಿಗೇ ಹೋಗಿ ಖಾತೆ ಹಕ್ಕು ಪತ್ರ ನೀಡಲಾಗಿದೆ. ಮಧ್ಯವರ್ತಿಗಳನ್ನು ನಿಯಂತ್ರಿಸುವ ಸಲುವಾಗಿ ಸಂಬಂಧಪಟ್ಟವರ ಮೊಬೈಲ್ ನಂಬರ್ ಪಡೆದು, ಅವರು ಖುದ್ದು ಬಂದರೆ ಮಾತ್ರ ಕಡತ ಪರಿಶೀಲಿಸಿ, ಖಾತೆ ಪತ್ರ ನೀಡಲು ತೀರ‌್ಮಾನಿಸಲಾಗಿದೆ. ಸಕಾಲದ ಅವಧಿ ಮುಗಿಯುವ ಮುಂಚೆ ಯಾರಿಗಾದರೂ ಖಾತೆ ಮಾಡಿಕೊಟ್ಟಿರುವ ನಿದರ್ಶನ ಸಾಭೀತಾದರೆ ಮುಲಾಜಿಲ್ಲದೇ ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಲಾಗುವುದು. ಲಂಚಕ್ಕೆ ಇಲ್ಲಿ ಅವಕಾಶವಿಲ್ಲ.
    ಪಿ.ಜೆ. ರಾಮಮೋಹನ್, ನಗರಸಭೆ ಅಧ್ಯಕ್ಷ

    ಇಂದಿನ ಧರಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ಪರವಾಗಿ ಕ್ಷಮೆ ಕೇಳಿದ್ದೇನೆ. ಹಳೇಪಾಳ್ಯದಲ್ಲಿರುವ ಮಗ್ಗದ ಮನೆಗಳಿಗೆ ವಾಣಿಜ್ಯ ಕಂದಾಯ ವಿಧಿಸುತ್ತಿರುವ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಅನ್ಯ ಜಿಲ್ಲೆಯಲ್ಲಿ ಮಗ್ಗದ ಮನೆಗಳಿಗೆ ವಾಣಿಜ್ಯ ಕಂದಾಯ ಕೈ ಬಿಟ್ಟಿರುವುದನ್ನು ಮನವರಿಕೆ ಮಾಡಲಾಗಿದೆ. ವಿನಾ ಕಾರಣ ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ.
    ಉಮಾಕಾಂತ್, ಆಯುಕ್ತ ನಗರಸಭೆ. ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts