More

    ಖಾಕಿ ಪಡೆಗೆ ಪ್ರತಿದಿನ ಡಬಲ್ ಡ್ಯೂಟಿ

    ರಾಮಚಂದ್ರ ಕಿಣಿ ಭಟ್ಕಳ

    ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್​ಡೌನ್ ಘೊಷಿಸಿದೆ. ಆದರೆ, ಈ ಲಾಕ್​ಡೌನ್ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಶ್ರಮಿಸುತ್ತಿರುವ ಖಾಕಿ ಪಡೆಗೆ ವಿರಾಮವೇ ಇಲ್ಲದಂತಾಗಿದೆ.

    ಇಂದು ಉತ್ತರ ಕನ್ನಡ ಜಿಲ್ಲೆ ರೆಡ್ ಜೋನ್​ನಿಂದ ಕಿತ್ತಳೆ ಜೋನ್​ಗೆ ಬರಲು ಖಾಕಿ ಪಡೆಯ ಪರಿಶ್ರಮವೇ ಪ್ರಮುಖ ಕಾರಣ. ಹಿಂದಿಗಿಂತಲೂ ಹೆಚ್ಚು ಹೊತ್ತು ಕರ್ತವ್ಯ ನಿರ್ವಹಿಸುತ್ತಿದ್ದು, 24 ಗಂಟೆಯೊಳಗೆ 2 ಪಾಳಿ ಡ್ಯೂಟಿ ಮಾಡುವ ಸ್ಥಿತಿಗೆ ಬಂದಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಂತೂ ಪೊಲೀಸರಿಗೆ ನೀರು ಕೇಳುವವರೂ ಇಲ್ಲದಂತಾಗಿದೆ.

    8 ಲಕ್ಷ ಜನರಿಗೆ 400 ಪೊಲೀಸರು: ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಇದೆ. ಗೋಕರ್ಣದಿಂದ ಭಟ್ಕಳದವರೆಗೆ ಭಟ್ಕಳ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಒಬ್ಬ ಡಿವೈಎಸ್​ಪಿ, 3 ಸಿಪಿಐ, 11 ಪಿಎಸ್​ಐ ಸೇರಿ ಒಟ್ಟು 400 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯ ಪಾಲನೆಗಾಗಿ 3 ಪಾಳಿಗಳನ್ನು ಮಾಡಲಾಗಿದೆ. ಆದರೆ, ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವ ಕಾರಣ ಒಬ್ಬ ಪೊಲೀಸ್ ಸಿಬ್ಬಂದಿ 2 ಪಾಳಿಗಳನ್ನು ನಿರ್ವಹಿಸಬೇಕಾಗಿದೆ.

    ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಒಂದು ಪಾಳಿಯಾದರೆ, ಮಧ್ಯಾಹ್ನ 2ರಿಂದ 10 ಗಂಟೆಯವರೆಗೆ ಇನ್ನೊಂದು ಪಾಳಿ. ರಾತ್ರಿ 10ರಿಂದ 6 ಗಂಟೆಯವರೆಗೆ ಆರಂಭವಾಗುವ ಇನ್ನೊಂದು ಪಾಳಿಯನ್ನು ಬೆಳಗ್ಗೆ ಮಾಡಿದ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಕೆಲವೇ ದಿನಗಳಾದರೆ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ, ಕಳೆದ ಒಂದು ತಿಂಗಳಿಂದ ಇದೇ ಪರಿಸ್ಥಿತಿ ಮುಂದುವರಿದಿರುವುದರಿಂದ ಪೊಲೀಸರು ವಿರಾಮ ಇಲ್ಲದೆ ಕಾರ್ಯ ಮಾಡುವಂತಾಗಿದೆ.

    ಕರೊನಾ ಡ್ಯೂಟಿ ಮಾತ್ರವಲ್ಲದೆ ಕಳ್ಳತನ, ಜಾನುವಾರು ಅಪಹರಣ ಸೇರಿ ವಿವಿಧ ಅಪರಾಧಗಳನ್ನು ತಡೆಯಬೇಕಾಗಿರುವುದರಿಂದ ಪೊಲೀಸರು ಹೆಚ್ಚಿನ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾಗಿದೆ.

    ನಮ್ಮ ಉಪವಿಭಾಗಕ್ಕೆ ಸದ್ಯ ಬೇರೆ ಕಡೆಯಿಂದ ಪೊಲೀಸ್ ಸಿಬ್ಬಂದಿ ಕರೆಸಿಲ್ಲ. ನಮ್ಮ ಉಪವಿಭಾಗದವರೆ ಇದನ್ನು ಮ್ಯಾನೇಜ್ ಮಾಡುತ್ತಿದ್ದೇವೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಯಾರೇ ಆದರೂ ಯಾವುದೇ ಸಂದರ್ಭದಲ್ಲಿ ರಜೆ, ಆರೋಗ್ಯ ತಪಾಸಣೆ, ವಿರಾಮ ಬೇಕಾದಲ್ಲಿ ನಾವು ಅವರಿಗೆ ನೀಡುತ್ತೇವೆ. ನಮ್ಮ ಉಪವಿಭಾಗದ ಎಲ್ಲ ಪೊಲೀಸರ ಆರೋಗ್ಯ ತಪಾಸಣೆ ನಡೆಸಲಿದ್ದೇವೆ. ಅವರ ಆರೋಗ್ಯ, ಕುಟುಂಬದ ಕುರಿತು ಪೊಲೀಸ್ ಇಲಾಖೆ ಕಾಳಜಿ ವಹಿಸುತ್ತಿದೆ.

    | ಗೌತಮ್ ಕೆ.ಸಿ. ಡಿವೈಎಸ್​ಪಿ, ಭಟ್ಕಳ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts