More

    ಕ್ಷಿಪ್ರಗತಿಯಲ್ಲಿ ಆಂಟಿಜನ್ ಪರೀಕ್ಷೆ ನಡೆಸಿ

    ಹಾವೇರಿ: ಕರೊನಾ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರ ಪತ್ತೆ ಹಚ್ಚುವುದು ಹಾಗೂ ಅವರನ್ನು ರ್ಯಾಪಿಡ್ ಆಂಟಿಜನ್ ತಪಾಸಣೆಗೆ ಒಳಪಡಿಸುವ ಕೆಲಸವನ್ನು ಅತ್ಯಂತ ತ್ವರಿತವಾಗಿ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಪೊಲೀಸ್ ಹಾಗೂ ತಹಸೀಲ್ದಾರ್ ಅವರೊಂದಿಗೆ ಮಂಗಳ ವಾರ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್ ಪಾಸಿಟಿವ್ ಪ್ರಕರಣ ಉಲ್ಭಣಗೊಳ್ಳುತ್ತಿವೆ. ಪಿಎಸ್​ಐ ಠಾಣೆ ವ್ಯಾಪ್ತಿಯಲ್ಲಿ ಸಂಪರ್ಕ ಪತ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ಸಂರ್ಪತರ ತಪಾಸಣೆ ಕ್ಷಿಪ್ರಗತಿಯಲ್ಲಿ ಕೈಗೊಂಡು ಪಾಸಿಟಿವ್ ಬಂದವರನ್ನು ನಿಯಮಾನುಸಾರ ಚಿಕಿತ್ಸೆಗೆ ಒಳಪಡಿಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

    ಕೆಲ ತಾಲೂಕುಗಳಲ್ಲಿ ಸಂಪರ್ಕ ಪತ್ತೆ ಹಾಗೂ ರ್ಯಾಪಿಡ್ ಆಂಟಿಜನ್ ಪರೀಕ್ಷೆಗಳಲ್ಲಿ ನಿರೀಕ್ಷಿತ ಸಾಧನೆಯಾಗುತ್ತಿಲ್ಲ. ಜಿಲ್ಲೆಯ ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಕೋವಿಡ್ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ವೈದ್ಯಾಧಿಕಾರಿಗಳನ್ನು ತಾಲೂಕು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನಿಯೋಜಿಸಿ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಯ ಕರ್ತವ್ಯದ ಜವಾಬ್ದಾರಿ ವಹಿಸಿ. ಇವರ ಸ್ಥಳದಲ್ಲಿ ಬಿಎಎಂಎಸ್ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂದು ಡಿಎಚ್​ಒಗೆ ಸೂಚಿಸಿದರು.

    ಸಂಪರ್ಕ ಪತ್ತೆಹಚ್ಚುವ ಕಾರ್ಯ ವಿಳಂಬವಾದಷ್ಟು ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ಸಂಪರ್ಕ, ತಪಾಸಣೆ, ಚಿಕಿತ್ಸೆ, ಕ್ವಾರಂಟೈನ್ ಗಂಭೀರತೆಯನ್ನು ಎಲ್ಲ ಅಧಿಕಾರಿಗಳು ಮನಗಾಣಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಎಸ್​ಪಿ ಕೆ.ಜಿ. ದೇವರಾಜ ಮಾತನಾಡಿ, ಇನ್ಮುಂದೆ ಪಿಎಸ್​ಐಗಳು ಸಂಪರ್ಕ ಪತ್ತೆ ಕಾರ್ಯನಿರ್ವಹಿಸಬೇಕು. ಸಿಪಿಐ ಉಸ್ತುವಾರಿ ನಡೆಸಬೇಕು. ಯಾವುದೇ ವ್ಯಕ್ತಿಗೆ ಪಾಸಿಟಿವ್ ದೃಢಪಟ್ಟ ತಕ್ಷಣ ಮಾಹಿತಿಯನ್ನು ಪಿಎಸ್​ಐಗಳಿಗೆ ರವಾನಿಸಬೇಕು. ಆಯಾ ಠಾಣೆ ವ್ಯಾಪ್ತಿಯ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಬೇಕು ಎಂದು ಸೂಚಿಸಿದರು.

    ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳ ಪಾಸಿಟಿವ್ ವ್ಯಕ್ತಿಗಳ ಮಾಹಿತಿ, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ವಿವರ, ಅವರ ಪರೀಕ್ಷೆ, ಚಿಕಿತ್ಸೆ, ಮರಣದ ವಿವರಗಳ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಯಾವ ಗ್ರಾಮಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆಯೋ ಆ ಗ್ರಾಮಗಳಲ್ಲಿ ತೀವ್ರ ನಿಗಾ ವಹಿಸಬೇಕು. ರ್ಯಾಪಿಡ್ ಆಂಟಿಜನ್ ಟೆಸ್ಟ್​ಗಳ

    ಸಂಖ್ಯೆ ಹೆಚ್ಚಿಸಬೇಕು. ರೋಗ ಲಕ್ಷಣಗಳು ಕಂಡುಬಂದರೂ ಪರೀಕ್ಷೆಗೆ ಮುಂದಾಗದ ವ್ಯಕ್ತಿಗಳನ್ನು ಪೊಲೀಸರ ನೆರವಿನಿಂದ ಪರೀಕ್ಷೆ ಮಾಡಬೇಕು ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗೆ ಬರುವ ರೋಗಿಗಳಿಗೆ ಗಂಭೀರ ಕಾಯಿಲೆ ಹಾಗೂ ಕೋವಿಡ್ ಲಕ್ಷಣಗಳು ಕಂಡುಬಂದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು. ಪಾಸಿಟಿವ್ ಬಂದವರಿಗೆ ಚಿಕಿತ್ಸೆಗೆ ಕಳುಹಿಸಿ, ಸಂಪರ್ಕ ಪತ್ತೆಗೆ ಕ್ರಮ ವಹಿಸಬೇಕು. ನೆಗಟಿವ್ ಬಂದವರನ್ನು ಆರ್​ಟಿ, ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಸ್​ಪಿ ವಿಜಯಕುಮಾರ ಸಂತೋಷ, ಎಸಿ ಡಾ. ದಿಲೀಪ್ ಶಶಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಪರಮೇಶ್ವರ ಹಾವನೂರ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts