More

    ಕ್ವಾರಂಟೈನ್ ಧರ್ಮಸಂಕಟದಲ್ಲಿ ಪೊಲೀಸರು

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ಲಾಕ್​ಡೌನ್ ಆದೇಶ ಜಾರಿಗಾಗಿ ಹಗಲಿರುಳೆನ್ನದೇ ದುಡಿಯುತ್ತಿರುವ ಆರಕ್ಷಕರಿಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ. ಕಷ್ಟಪಟ್ಟು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಹಸ್ತಾಂತರಿಸುವ ಮೊದಲು ಕರೊನಾ ತಪಾಸಣೆ ಮಾಡಿಸುವ ಅನಿವಾರ್ಯತೆ ಎದುರಾಗಿದೆ.

    ಆರೋಪಿಗಳ ಕರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದ ಬಳಿಕವಷ್ಟೇ ಅವರಿಗೆ ಜೈಲಿನಲ್ಲಿ ಜಾಗ ಕೊಡಲಾಗುವುದು ಎಂದು ಜೈಲಧಿಕಾರಿಗಳು ಖಡಾಖಂಡಿತವಾಗಿ ಹೇಳಿದ್ದಾರೆ.

    ಕಳೆದ ವಾರ ರಾಯನಾಳ ಗ್ರಾಮದ ಹೊರ ವಲಯದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ಬಂದರೆಂದು ತಪ್ಪಿಸಿಕೊಳ್ಳಲು ಹೋಗುವಾಗ ಎಡವಿ ಬಿದ್ದು ಹನುಮಂತ ಎಂಬಾತ ಸಾವನ್ನಪ್ಪಿದ್ದ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭಾನುವಾರ 7 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನೇರವಾಗಿ ವಿಶ್ವೇಶ್ವರ ನಗರದ ಉಪ ಕಾರಾಗೃಹಕ್ಕೆ ಕರೆದೊಯ್ದ ಪೊಲೀಸರಿಗೆ, ಕರೊನಾ ಪರೀಕ್ಷೆ ನೆಗೆಟಿವ್ ಬಂದ ಬಳಿಕವೇ ದಾಖಲಿಸಿಕೊಳ್ಳುತ್ತೇವೆ ಎಂದು ಜೈಲರ್ ಹೇಳಿದರು. ದಿಕ್ಕೇ ತೋಚದಂತಾದ ಪೊಲೀಸರು ಕಿಮ್ಸ್​ಗೆ ತೆರಳಿ ತಪಾಸಣೆ ಮಾಡಿಸಿದರು. ನಂತರ ಆರೋಪಿಗಳನ್ನು ಲಾಡ್ಜ್​ವೊಂದರಲ್ಲಿ ಕ್ವಾರಂಟೈನ್​ಗೆ ಒಳಪಡಿಸಿ ಬರುವಷ್ಟರಲ್ಲಿ ಮಧ್ಯರಾತ್ರಿ 12 ದಾಟಿತ್ತು. ವರದಿ ಬರುವವರೆಗೂ ಆರೋಪಿಗಳನ್ನು ಕಾಯುವ ಹೊಣೆಯೂ ಪೊಲೀಸರ ಹೆಗಲಿಗೆ ಬಿದ್ದಿದೆ.

    ಪ್ರೇಮ ವಿರೋಧಿಗಳೂ ಕ್ವಾರಂಟೈನ್: ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮಿಗಳಿಗೆ ಧಮಕಿ ಹಾಕಿದ್ದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಅವರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    ಉಪ ಕಾರಾಗೃಹದಲ್ಲಿ 100ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದಾರೆ. ಅವರ ಮತ್ತು ಸಿಬ್ಬಂದಿಯ ಆರೋಗ್ಯ ರಕ್ಷಣೆ ನಮ್ಮ ಹೊಣೆಯಾಗಿದೆ. ಹೀಗಾಗಿ, ಹೊಸದಾಗಿ ಬರುವ ಆರೋಪಿಗಳ ಕರೊನಾ ತಪಾಸಣೆ ವರದಿ ನೆಗೆಟಿವ್ ಬಂದ ಬಳಿಕವೇ ದಾಖಲಿಸಿಕೊಳ್ಳಲಾಗುತ್ತಿದೆ. | ಅಶೋಕ ಭಜಂತ್ರಿ, ಜೈಲರ್ ಉಪ ಕಾರಾಗೃಹ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts