More

    ಕ್ವಾರಂಟೈನ್​ಗಾಗಿ ಹೋಟೆಲ್ ಅಯೋಧ್ಯಾ ಜಿಲ್ಲಾಡಳಿತದ ವಶಕ್ಕೆ

    ಹುಬ್ಬಳ್ಳಿ: ಕರೊನಾ ಸೋಂಕು ಶಂಕಿತರನ್ನು ಕ್ವಾರಂಟೈನ್ (ಪ್ರತ್ಯೇಕ ವಾಸ)ನಲ್ಲಿ ಇಡುವ ಉದ್ದೇಶದಿಂದ ನಗರದ ಹಳೇ ಬಸ್ ನಿಲ್ದಾಣ ಎದುರಿನ ಅಯೋಧ್ಯಾ ಹೋಟೆಲ್​ಅನ್ನು ಧಾರವಾಡ ಜಿಲ್ಲಾಡಳಿತ ಮಂಗಳವಾರ ವಶಕ್ಕೆ ಪಡೆದುಕೊಂಡಿದೆ. ಇಲ್ಲಿನ ಹವಾನಿಯಂತ್ರಿತ ಸೌಲಭ್ಯ ರಹಿತ ಒಟ್ಟು 80 ಕೋಣೆಗಳಿದ್ದು, ಅದರಲ್ಲಿ 50 ಕೋಣೆಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

    ನಿಜಾಮುದ್ದೀನ್​ಗೆ ತೆರಳಿದ್ದ ಧಾರವಾಡ ಜಿಲ್ಲೆಯ 20 ಜನರು ಸೇರಿ ಒಟ್ಟು 50 ಜನರನ್ನು ಈ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿ ಇಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಮಹಾನಗರ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ಹಾಗೂ ಇತರ ವೈದ್ಯಾಧಿಕಾರಿಗಳ ತಂಡ ಮಂಗಳವಾರ ಹೋಟೆಲ್​ಗೆ ತೆರಳಿ, ಕ್ವಾರಂಟೈನ್​ಗೆ ಬೇಕಾದ ಸೌಲಭ್ಯಗಳನ್ನು ಹಾಗೂ ಥರ್ಮಲ್ ಸ್ಕಾ್ಯನಿಂಗ್ ಉಪಕರಣ ಸೇರಿ ಇತರ ವೈದ್ಯಕೀಯ ಉಪಕರಣಗಳನ್ನು ಪರಿಶೀಲಿಸಿತು.

    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಮನೆಯಲ್ಲೇ ಪ್ರತ್ಯೇಕವಾಸ ಸೂಚಿಸಿದ್ದರೂ ಸರಿಯಾಗಿ ಪಾಲಿಸದವರು ಮತ್ತು ಹೊಸದಾಗಿ ಬರುವ ಶಂಕಿತರನ್ನು ಖಾಸಗಿ ಹೋಟೆಲ್​ನಲ್ಲಿ ಸಜ್ಜುಗೊಳಿಸಿರುವ ಕೋಣೆಗಳಿಗೆ ಸ್ಥಳಾಂತರಿಸಲಾಗುವುದು. ಪ್ರತ್ಯೇಕ ವಾಸಕ್ಕೆ ಸೂಚಿಸಲ್ಪಟ್ಟಿರುವವರು ಒಂದೆಡೆ ಇದ್ದರೆ ಅವರ ಆರೋಗ್ಯದ ಮೇಲೆ ಗಮನ ಹರಿಸಲು ಸುಲಭವಾಗುತ್ತದೆ. ಇಲ್ಲಿನವರ ಆರೋಗ್ಯ ತಪಾಸಣೆಗೆ, ತ್ಯಾಜ್ಯ ವಸ್ತುಗಳ ಸಂಗ್ರಹ ಹಾಗೂ ವಿಲೇವಾರಿಗೆ, ಸ್ವಚ್ಛತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೇಳಿದರು.

    ಪ್ರತ್ಯೇಕ ವಾಸದಲ್ಲಿರುವವರಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಕಿಮ್ಸ್​ಗೆ ಸ್ಥಳಾಂತರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

    ಕರೊನಾ ಸೋಂಕು ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇಡುವುದಕ್ಕಾಗಿ ಜಿಲ್ಲಾಡಳಿತ ಎಲ್ಲ ಹೋಟೆಲ್​ಗಳಿಗೆ ಈಗಾಗಲೇ ನೋಟಿಸ್ ನೀಡಿದೆ. ಸೋಂಕಿನ ಶಂಕೆ ಇದ್ದವರ ಸಂಖ್ಯೆ ಹೆಚ್ಚಾದಲ್ಲಿ ಇತರ ಹೋಟೆಲ್​ಗಳನ್ನು ಸಹ ವಶಕ್ಕೆ ಪಡೆಯಲಾಗುವುದು. | ಶಶಿಧರ ಮಾಡ್ಯಾಳ ಹುಬ್ಬಳ್ಳಿ ನಗರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts