More

    ಕ್ರಿಯಾಶೀಲತೆಯಿಂದ ಪ್ರಗತಿ ಸಾಧಿಸೋಣ

    ಬೆಳಗಾವಿ: ಭಾರತದ ನವೋದ್ಯಮವು ಜಗತ್ತಿನ ಆಕರ್ಷಕ ಕೇಂದ್ರವಾಗಿದೆ. ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

    ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮಾತನಾಡಿದರು. ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭರ್ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

    ರಾಣಿ ಚನ್ನಮ್ಮ ಅವರ ತ್ಯಾಗ-ಬಲಿದಾನ ಹಾಗೂ ಶೌರ್ಯ-ಪರಾಕ್ರಮವನ್ನು ಸ್ಮರಿಸಿದ ಅವರು, ಯುವ ಸಮುದಾಯಕ್ಕೆ ರಾಣಿ ಚನ್ನಮ್ಮ ಪ್ರೇರಣೆಯಾಗಲಿ. ಮಾತೃಭಾಷೆಗೆ ಆದ್ಯತೆ ದೊರಕಬೇಕು. ದೇಶದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಭಾನ್ವಿತ ಯುವ ಸಮುದಾಯಕ್ಕೆ ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದರು.

    ಶಾಲೆಯಲ್ಲಿನ ವಿಜ್ಞಾನ ಹಾಗೂ ಪ್ರಯೋಗಾಲಯದ ವಿಜ್ಞಾನದ ನಡುವೆ ಅಂತರವು ನಿರಂತರವಾಗಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ತಿಳಿಸುವ ಅಗತ್ಯವಿದೆ ಎಂದು ಆಂಧ್ರಪ್ರದೇಶದ ವಿಜಯನಗರಂ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ ಪ್ರತಿಪಾದಿಸಿದರು.

    ದೇಶದ ಅತ್ಯುನ್ನತ ಉನ್ನತ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್‌ಐಟಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯುತ್ತಿವೆ. ಆದರೆ ಈ ಸಂಸ್ಥೆಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುವುದರಿಂದ ಹೆಚ್ಚು ಜನರಿಗೆ ಕಲಿಕೆಯ ಅವಕಾಶ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕೂಡ ಇನ್ನೂ ಹೆಚ್ಚಿನ ವಿಶೇಷ ಅನುದಾನ ಒದಗಿಸಬೇಕು ಎಂದು ಡಾ.ಕಟ್ಟಿಮನಿ ಹೇಳಿದರು.

    ಶಿಕ್ಷಣ, ತಂತ್ರಜ್ಞಾನ ಹಾಗೂ ಸಂಶೋಧನೆಯನ್ನು ಭಾರತದ ಪ್ರಗತಿಯ ಸಾಧನಗಳನ್ನಾಗಿ ಬಳಸಿಕೊಂಡು ಅಭಿವೃದ್ಧಿ ಸಾಧಿಸಬೇಕಿದೆ. ಕುಡಿಯುವ ನೀರಿನ ತತ್ವಾರ ನೀಗಿಸಬೇಕಾದರೆ ಅಂತರ್ಜಲ ಸಂರಕ್ಷಣೆ ಜತೆಗೆ ನೀರಿನ ಸಮರ್ಪಕ ಬಳಕೆಗೆ ಸೂಕ್ತ ಯೋಜನೆ ರೂಪಿಸಬೇಕಿದೆ ಎಂದರು. ಕುಲಪತಿ ಪ್ರೊ.ರಾಮಚಂದ್ರಗೌಡ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವ ಪ್ರೊ.ಎಂ.ಹನುಮಂತಪ್ಪ, ಹಣಕಾಸು ಅಧಿಕಾರಿ ಪ್ರೊ. ಡಿ.ಎನ್.ಪಾಟೀಲ, ವಿವಿಯ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿದ್ಯಾರ್ಥಿಗಳು, ಪಾಲಕರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts