More

    ಕೋವಿಡ್ ತಪಾಸಣೆ ವರದಿ 24 ತಾಸಿನಲ್ಲಿ ದೊರಕಬೇಕು

    ಕಲಬುರಗಿ: ಕೋವಿಡ್-19 ತಪಾಸಣೆಯ ವೈದ್ಯಕೀಯ ವರದಿ ಸ್ಯಾಂಪಲ್ ಪಡೆದ 24 ತಾಸಿನಲ್ಲಿ ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ಕೆ.ಕೆ.ಆರ್.ಡಿ.ಬಿ. ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಮತ್ತು ಜಿಮ್ಸ್ ಆಸ್ಪತ್ರೆಗೆ ಮಂಡಳಿಯಿಂದ ನೀಡಲಾದ ಅನುದಾನದಲ್ಲಿ ತೆಗೆದುಕೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    ಸ್ಯಾಂಪಲ್ ನೀಡಿದ ವ್ಯಕ್ತಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ವರದಿ ನೀಡುವತ್ತ ಹೆಚ್ಚಿನ ಗಮನಹರಿಸಬೇಕಾಗಿದೆ. ಸ್ಯಾಂಪಲ್ ಪಡೆದು ವಾರಗಟ್ಟಲೆ ವರದಿ ಬಾರದಿದ್ದಲ್ಲಿ ಜನರು ಅನಗತ್ಯ ಗೊಂದಲಕ್ಕೆ ಈಡಾಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಸ್ಯಾಂಪಲ್ಸ್ ಹೆಚ್ಚು ಸಂಗ್ರಹಗೊಂಡಲ್ಲಿ ಬೆಂಗಳೂರು ಅಥವಾ ಪುಣೆಗೆ ಕಳುಹಿಸಿ 24 ತಾಸಿನಲ್ಲಿ ವೈದ್ಯಕೀಯ ವರದಿ ಸಂಬಂಧಿಸಿದ ವ್ಯಕ್ತಿಗಳಿಗೆ ತಿಳಿಸುವ ಕೆಲಸವಾಗಬೇಕು ತಾಕೀತು ಮಾಡಿದರು.
    ಮರಣ ಪ್ರಮಾಣ ತಗ್ಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿಮ್ಸ್, ಇಎಸ್ಐಸಿ ಸೇರಿ ಎಲ್ಲ ಕೋವಿಡ್-19 ಕೇಂದ್ರಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮನ್ವಯತೆ ಸಾಧಿಸಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿ ಎಂದು ಸೂಚಿಸಿದರು.
    ಸಭೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾ ಪಂಚಾಯಿತಿ ಸಿಸಿಒ ಡಾ.ಪಿ.ರಾಜಾ, ಡಿಚ್ಒ ಡಾ.ರಾಜಶೇಖರ್, ಡಿ.ಸಿ.ಪಿ. ಕಿಶೋರ ಬಾಬು, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಧನಂಜಯ ಕುರಿ, ಪ್ರಹ್ಲಾದ ಪೂಜಾರಿ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಡಾ.ಸಂದೀಪ್, ಸಹಾಯಕ ಆಡಳಿತಾಧಿಕಾರಿ ಪಾರ್ವತಿ ಸೇರಿದಂತೆ ಇ.ಎಸ್.ಐ.ಸಿ. ಮತ್ತು ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ನೀರು ಪೂರೈಸಲೆಂದೇ 2.77 ಕೋಟಿ ರೂ. ಮೊತ್ತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮೂಲಕ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ಮಾರ್ಚ್​ 2 ರಂದೇ ಅನುಮೋದನೆ ನೀಡಿದರೂ ಕಾಮಗಾರಿ ಆರಂಭಿಸಿಲ್ಲ. ಕಾಮಗಾರಿ ಕೈಗೆತ್ತಿಕೊಳ್ಳಿ.
    | ದತ್ತಾತ್ರೇಯ ಪಾಟೀಲ್ ರೇವೂರ, ಕೆಕೆಆರ್ಡಿಬಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts