More

    ಕೋವಿಡ್ ಚಿಕಿತ್ಸೆಗೆ ಕೈಗಾರಿಕಾ ಆಕ್ಸಿಜನ್

    ಮಂಗಳೂರು: ಲಿಕ್ವಿಡ್ ಆಕ್ಸಿಜನ್‌ಗೆ ದಿಢೀರ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಬಳಕೆಯ ಎಲ್ಲ ಆಕ್ಸಿಜನ್‌ಗಳನ್ನೂ ವೈದ್ಯಕೀಯ ಬಳಕೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಉಪಯೋಗದ ಆಕ್ಸಿಜನ್ ಬೇಡಿಕೆಯು ದಿನಕ್ಕೆ ಸರಿಸುಮಾರು 3 ಟನ್ ಇದ್ದದ್ದು ಈಗ ದುಪ್ಪಟ್ಟಾಗಿದೆ. ಹಾಗಾಗಿ ಸದ್ಯಕ್ಕೆ ಇಂಜಿನಿಯರಿಂಗ್ ಕೈಗಾರಿಕೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಬಳಸದೆ ಎಲ್ಲವನ್ನೂ ವೈದ್ಯಕೀಯ ಬಳಕೆಗೆ ನೀಡುವಂತೆ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಕೋವಿಡ್ ಚಿಕಿತ್ಸೆಯಲ್ಲಿ ಆಕ್ಸಿಜನ್ ಅಗತ್ಯವಾಗಿದ್ದು, ರೋಗಿಗಳ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಕುಸಿದಾಗ ತಕ್ಷಣ ಆಕ್ಸಿಜನ್ ಪೂರೈಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ಆಕ್ಸಿಜನ್ ಬೆಡ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಆಕ್ಸಿಜನ್‌ನ ಸಂಗ್ರಹ ಸದ್ಯಕ್ಕೆ ಸಾಕಷ್ಟಿದೆ. ಆದರೆ ಕರೊನಾ ರೋಗಿಗಳ ಸಂಖ್ಯೆ ತೀವ್ರವಾಗಿ ಏರಿದರೆ ಸಮಸ್ಯೆಯಾಗಬಹುದು ಎನ್ನುತ್ತಾರೆ ವೈದ್ಯರು.

    ಜಿಲ್ಲೆಯಲ್ಲಿ ಉತ್ಪಾದನೆ ಇಲ್ಲ: ಸದ್ಯ ಮೂಲ್ಕಿಯ ಕಾರ್ನಾಡು ಸಹಿತ ಜಿಲ್ಲೆಯಲ್ಲಿ ಮೂರು ಕಡೆ ಲಿಕ್ವಿಡ್ ಆಕ್ಸಿಜನ್ ರಿಫಿಲ್ಲಿಂಗ್ ನಡೆಸಲಾಗುತ್ತಿದೆ. ಜಿಲ್ಲೆಯಲ್ಲೆಲ್ಲೂ ಆಕ್ಸಿಜನ್ ಉತ್ಪಾದಿಸುವ ಸೌಲಭ್ಯ ಇಲ್ಲ. ಬಳ್ಳಾರಿಯ ಸಂಡೂರಿನ ಜೆಎಸ್‌ಡಬ್ಲುನಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ಅಲ್ಲಿಂದ ರಾಜ್ಯದ ಇತರ ಕಡೆಗೆ ಟ್ಯಾಂಕರ್‌ಗಳಲ್ಲಿ ರವಾನಿಸಿ ಸಿಲಿಂಡರ್‌ಗಳಿಗೆ ಫಿಲ್ಲಿಂಗ್ ಮಾಡಲಾಗುತ್ತಿದೆ.

    ಆಕ್ಸಿಜನ್ ಪೂರೈಕೆ ಕುರಿತು ಸಭೆ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಆಕ್ಸಿಜನ್ ಪೂರೈಸುವ ಕುರಿತು ಆಕ್ಸಿಜನ್ ಪೂರೈಕೆದಾರರು, ಐಎಂಎ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ, ಸಕಾಲದಲ್ಲಿ ಆಕ್ಸಿಜನ್ ಪೂರೈಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

    ವೆನ್ಲಾಕ್ ಸಹಿತ 6 ಆಕ್ಸಿಜನ್ ಪ್ಲಾಂಟ್: ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದಿಸಲು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸದಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಮುಂದಿನ 45-50 ದಿನಗಳೊಳಗೆ ಪ್ಲಾಂಟ್ ನಿರ್ಮಾಣವಾಗಲಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಜಿಲ್ಲಾಡಳಿತದ ವತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
    ಈಗಾಗಲೇ ಇಎಸ್‌ಐ ಆಸ್ಪತ್ರೆ ಹಾಗೂ ಬಂಟ್ವಾಳದ ತಾಲೂಕು ಆಸ್ಪತ್ರೆಯಲ್ಲಿ ಎಂಸಿಎಫ್ ವತಿಯಿಂದ ಸಿಎಸ್‌ಆರ್ ಅನುದಾನದಡಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವ ಕುರಿತು ನಿರ್ಧರಿಸಲಾಗಿದೆ. ಇನ್ನೊಂದು ತಾಲೂಕಿಗೆ ಎಂಆರ್‌ಪಿಎಲ್ ನೆರವಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಲಾಗಿದೆ. ಇನ್ನುಳಿದ ಎರಡು ತಾಲೂಕುಗಳಿಗೆ ಸಣ್ಣ ಪ್ರಮಾಣದ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಅತಿ ಶೀಘ್ರದಲ್ಲೇ ಯೋಜನೆ ಪೂರ್ಣಗೊಳಿಸುವ ಚಿಂತನೆಯಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts