More

    ಕೋಲಾರ ಜಿಲ್ಲೆಗೆ ಎ ಶ್ರೇಣಿ ಗೌರವ

    ಕೋಲಾರ: ಜಿಲ್ಲೆಯ 117 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲ 19382 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗುಣಮಟ್ಟದಲ್ಲಿ ಜಿಲ್ಲೆಗೆ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸ್ಥಾನ ದೊರೆತಿದ್ದು ಎ ಶ್ರೇಣಿ ಲಭಿಸಿದೆ.

    ಕ್ಷೌರಿಕರೊಬ್ಬರ ಪುತ್ರಿ ಸಿ.ವರ್ಷಿಣಿ ಹಾಗೂ ಶಿಕ್ಷಕಿಯ ಪುತ್ರಿ ಕೆ.ಪೂರ್ವಿ ರಾಜ್ಯಕ್ಕೆ ಮೊದಲಿಗರಾಗಿ ಸಾಧನೆ ಮಾಡಿದ್ದಾರೆ.
    ಕೋವಿಡ್ ಸಂಕಷ್ಟದ ನಡುವೆ ಕಳೆದ ಜು.19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಇತಿಹಾಸದಲ್ಲೇ ಮೊದಲೆನ್ನುವಂತೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ನೀಡಿ ಮಕ್ಕಳಿಗೆ ಪರೀಕ್ಷೆ ನಡೆಸಲಾಗಿತ್ತು. ಮಕ್ಕಳು ವಿಷಯವಾರು 40 ಅಂಕಗಳಿಗೆ ಪಡೆದ ಅಂಕಗಳನ್ನು 80 ಅಂಕಗಳಿಗೆ ಬದಲಿಸಿ, ಅದಕ್ಕೆ ಆಂತರಿಕ ಅಂಕ ಸೇರಿಸಿ 625 ಅಂಕಗಳಿಗೆ ಇದೀಗ ಫಲಿತಾಂಶ ಘೋಷಿಸಲಾಗಿದೆ.

    ಜಿಲ್ಲೆಯಲ್ಲಿ ಪರೀಕ್ಷೆಗೆ 19382 ಹೊಸ ಶಾಲಾ ಅಭ್ಯರ್ಥಿಗಳು ಕುಳಿತಿದ್ದು, ಇದರಲ್ಲಿ 10048 ಬಾಲಕರು, 9334 ಬಾಲಕಿಯರು ಇದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದಿದ್ದ 378 ಬಾಲಕ, 142 ಬಾಲಕಿಯರು ಸೇರಿ ಒಟ್ಟು 520 ಮಕ್ಕಳೂ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಟ್ಟು 11804 ಮಕ್ಕಳು ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 6346 ಬಾಲಕರು ಹಾಗೂ 5458 ಬಾಲಕಿಯರಿದ್ದಾರೆ. ನಗರ ಪ್ರದೇಶ 3702 ಬಾಲಕರು, 3876 ಬಾಲಕಿಯರು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.

    ಕ್ಷೌರಿಕರ ಪುತ್ರಿ ರಾಜ್ಯಕ್ಕೆ ಪ್ರಥಮ: ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿದ್ದು, ಗೌರವ ತಂದಿದ್ದಾರೆ. ಕೆಜಿಎಫ್ ನಗರದ ಸೆಂಟ್‌ತೆರೆಸಾ ಬಾಲಕಿಯ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ವರ್ಷಿಣಿ ಈ ಸಾಧನೆ ಮಾಡಿದ್ದಾರೆ. 625 ಅಂಕ ಗಳಿಸಿರುವ ಈ ಸಾಧಕಿ ಕೆಜಿಎಫ್ ನಗರದ ಗೌತಮ ನಗರದ 6ನೇ ಕ್ರಾಸ್‌ನಲ್ಲಿ ಶೇವಿಂಗ್ ಸೆಲೂನ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಎಂ.ಚಂದ್ರಶೇಖರ್ ಹಾಗೂ ಎನ್.ಶೋಭಾರಾಣಿ ದಂಪತಿ ಪುತ್ರಿ.

    ಶಿಕ್ಷಕಿಯ ಪುತ್ರಿಯ ಸಾಧನೆ: ಮತ್ತೊಬ್ಬ ಸಾಧಕಿ ಶ್ರೀನಿವಾಸಪುರ ಹೊರವಲಯದ ಬೈಯಪ್ಪಲ್ಲಿಯ ಬೈರವೇಶ್ವರ ಶಾಲೆಯ ವಿದ್ಯಾರ್ಥಿನಿ ಕೆ.ಪೂರ್ವಿ, 625 ಅಂಕ ಪಡೆದು ರಾಜ್ಯಕ್ಕೆ ಮೊದಲಿಗಳಾಗಿ ಜಿಲ್ಲೆಯ ಕೀರ್ತಿ ಬೆಳಗಿದ್ದಾಳೆ. ಶ್ರೀನಿವಾಸಪುರದ ದಳಸನೂರು ಸಮೀಪದ ಹೊಸಹಳ್ಳಿ ಸೊಸೈಟಿಯ ನಿವೃತ್ತ ನೌಕರ ಕೃಷ್ಣಾರೆಡ್ಡಿ ಹಾಗೂ ಶಿಕ್ಷಕಿ ಬೈಯಮ್ಮ ದಂಪತಿ ಪುತ್ರಿ.
    ಎಸ್ಸೆಸ್ಸೆಲ್ಸಿ ಸಾಧಕರಾಗಿ ಹೊರಹೊಮ್ಮಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಉತ್ತೀರ್ಣರಾದ ಎಲ್ಲರಿಗೂ ಡಿಡಿಪಿಐ ಎಸ್.ಜಿ.ನಾಗೇಶ್, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಗಂಗರಾಮಯ್ಯ, ಎಪಿಸಿಒ ಮೋಹನ್‌ಬಾಬು, ಸಿದ್ದೇಶ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವದನ, ಕೃಷ್ಣಪ್ಪ, ಬಿ.ವೆಂಕಟೇಶಪ್ಪ ಶುಭ ಹಾರೈಸಿದ್ದಾರೆ

    ಆನ್‌ಲೈನ್ ಕೋಚಿಂಗ್‌ಗೆ ನೆಟ್‌ವರ್ಕ್ ಪ್ರಾಬ್ಲಂ ನಡುವೆಯೂ ನಾನು 625ಕ್ಕೆ 625 ಅಂಕಗಳನ್ನು ಗಳಿಸಲು ನನ್ನ ಪಾಲಕರು ಮತ್ತು ಶಿಕ್ಷಕ ವರ್ಗದ ಅಮೂಲ್ಯವಾದ ಸಲಹೆ, ಮಾರ್ಗದರ್ಶನ ಫಲ ನೀಡಿದೆ. ಎಂಇಕ್ಯೂ ಮಾದರಿಯ ಪರೀಕ್ಷೆಯಿಂದ ಆತಂಕ ಎದುರಾಗಿತ್ತು. ಪರೀಕ್ಷೆಗೆ ಒಂದು ತಿಂಗಳ ಕಠಿಣ ಪರಿಶ್ರಮದಿಂದಾಗಿ ಗುರಿ ಸಾಧಿಸುವಂತಾಗಿದೆ. ಮಾಮೂಲಿಯಾಗಿ ಪರೀಕ್ಷೆ ನಡೆದಿದ್ದಲ್ಲಿ ಇನ್ನಷ್ಟು ಉತ್ತಮ ಸಾಧನೆ ತೋರಬಹುದಾಗಿತ್ತು. ಲಾಕ್‌ಡೌನ್‌ನಿಂದ ನನಗೆ ಪ್ರಯೋಜನವಾಗಿದೆ. ಮುಂದೆ ವೈದ್ಯಳಾಗಿ ಬಡವರ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದೇನೆ. ಈಗಾಗಲೇ ಪಿಯುಸಿಗೆ ಆನ್‌ಲೈನ್ ಕೋಚಿಂಗ್ ಪಡೆಯಲಾರಂಭಿಸಿದ್ದೇನೆ.
    ಕೆ. ಪೂರ್ವಿ

    ಹಳ್ಳಿಯಲ್ಲಿ ಇಂಟರ್‌ನೆಟ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನನ್ನ ತಂದೆ ನನಗೋಸ್ಕರ್ ಕೆಜಿಎಫ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಾವು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವರು. ತಂದೆಯ ಕಷ್ಟ ಅರಿತು ಓದಿಗೆ ಹೆಚ್ಚಿನ ಆದ್ಯತೆ ನೀಡಿದ್ದೆ. ಕರೊನಾದಿಂದ ಭವಿಷ್ಯಕ್ಕೆ ಪೆಟ್ಟಾಗುತ್ತದೆ ಎಂಬ ಭಯ ಕಾಡಿತ್ತು. ಆದರೆ ಶಾಲೆಯ ವಾತಾವರಣ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಟಾಪರ್ ಆಗಿ ಹೊರಹೊಮ್ಮಿದ್ದೇನೆ. ಸಿಲೆಬಸ್ ಅನ್ವಯ ದಿನಕ್ಕೆ 5ರಿಂದ 6 ಗಂಟೆ ಶ್ರದ್ಧೆಯಿಂದ ಓದುತ್ತಿದ್ದೆ. ಹೀಗಾಗಿ ಪರೀಕ್ಷೆ ಕಷ್ಟ ಎನಿಸಲಿಲ್ಲ. ಮುಂದೆ ವೈದ್ಯಳಾಗಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ.
    ಸಿ.ವರ್ಷಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts