More

    ಕೋಣನೂರಿನಲ್ಲಿ ಸೋಮಣ್ಣ ರೋಡ್ ಶೋ

    ನಂಜನಗೂಡು: ಚುನಾವಣೆಯಲ್ಲಿ ಪೈಪೋಟಿ ಸಹಜವಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳಲು ಗ್ರಾಮಕ್ಕೆ ಬಂದವರಿಗೆ ಕಲ್ಲು ತೂರಾಟ ನಡೆಸುವಂತಹ ಸಂಸ್ಕೃತಿಯನ್ನು ಕಾಂಗ್ರೆಸ್ಸಿಗರು ತೋರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಆದರೆ ಇಂತಹ ಘಟನೆಗಳಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದುವುದಿಲ್ಲ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

    ತಾಲೂಕಿನ ಕೊಣನೂರು ಗ್ರಾಮದಲ್ಲಿ ಶುಕ್ರವಾರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿ, ಮತ ಕೇಳಲು ಬರುವವರಿಗೆ ಕಲ್ಲು ತೂರಾಟ ಮಾಡುವುದು ಅಕ್ಷಮ್ಯ. ಆದರೆ ಇಂತಹ ಸಮಯದಲ್ಲೂ ವರುಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಾವುದೇ ಪ್ರಚೋದನೆಗೆ ಒಳಗಾಗದೆ ಸಂಯಮ ತೋರಿದ್ದಾರೆ. ವರುಣ ಕ್ಷೇತ್ರದ ಜನರು ಅಭಿವೃದ್ಧಿ ಬಯಸಿದ್ದಾರೆ. ದೇವರ ಅನುಗ್ರಹ ಹಾಗೂ ಮತದಾರರ ಆಶೀರ್ವಾದದೊಂದಿಗೆ ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯ ಅವರು ಒಂದು ಬಾರಿ ಮುಖ್ಯಮಂತ್ರಿಯಾಗಿ 13 ಬಾರಿ ಹಣಕಾಸು ಮಂತ್ರಿಯಾಗಿ ಅನುಭವವುಳ್ಳವರು. ಅವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೆಲಸ ಮಾಡಿದ್ದರೆ ವರುಣ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಬಹುದಿತ್ತು. ಆದರೆ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಸೇರಿದಂತೆ ಗುಂಡಿ ಬಿದ್ದ ರಸ್ತೆಗಳು ವರುಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಹೇಳುತ್ತಿವೆ. ಹೀಗಾಗಿ ವರುಣದಲ್ಲಿ ಜನರು ಈ ಬಾರಿ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಅಭಿವೃದ್ಧಿಗೆ ಮನ್ನಣೆ ನೀಡಲಿದ್ದಾರೆ ಎಂದು ಹೇಳಿದರು.

    ತಾಲೂಕಿನ ಚುಂಚನಹಳ್ಳಿ, ಹನುಮನಪುರ, ಕೊಣನೂರು ಪಾಳ್ಯ, ದಾಸನೂರು, ಮರಳ್ಳಿಪುರ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ತೊರಳ್ಳಿ, ಹಾರೋಪುರ, ಸಾಲುಂಡಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದರು.

    ನಿವೃತ್ತ ಪೊಲೀಸ್‌ಅಧಿಕಾರಿ ರೇವಣ್ಣಸಿದ್ದಯ್ಯ, ಕಾ.ಪು.ಸಿದ್ದಲಿಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಜಿಪಂ ಮಾಜಿ ಸದಸ್ಯ ಸದಾನಂದ, ಮೃಗಾಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ರೋಡ್ ಶೋನಲ್ಲಿ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts