More

    ಕೋಟೆ ಕೆರೆ ಪರಿಸರದಲ್ಲಿ ದುರ್ನಾತ

    ಬೆಳಗಾವಿ: ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕಾಗಿ ಕೋಟೆ ಕೆರೆಯತ್ತ ಮುಖ ಮಾಡುವವರಿಗೆ ಅವ್ಯವಸ್ಥೆ ದರ್ಶನವಾಗುತ್ತಿದೆ. ನಗರದ ಹೃದಯಭಾಗದಲ್ಲಿರುವ ಕೋಟೆ ಕೆರೆಗೆ ವಾಯು ವಿಹಾರಕ್ಕೆ ನಿತ್ಯ ನೂರಾರು ಜನರು ಬರುತ್ತಾರೆ. ಆದರೆ, ಈ ಪರಿಸರದಲ್ಲಿ ದುರ್ನಾತ ಹೆಚ್ಚಿದ್ದು, ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ಆದರೂ, ಅವ್ಯವಸ್ಥೆ ಸರಿಪಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ವಾಯು ವಿಹಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ನಿರ್ವಹಣೆ ಇಲ್ಲದ ಚರಂಡಿ: ಕೆರೆಯ ಮುಖ್ಯ ದ್ವಾರದಿಂದ ಬುಡಾ ಕಚೇರಿ ಸಮೀಪದವರೆಗೂ ಬೃಹತ್ ಚರಂಡಿ ಹಾಯ್ದುಹೋಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಚರಂಡಿಯಲ್ಲಿನ ತ್ಯಾಜ್ಯ ತೆಗೆದರೂ ಬೇರೆಡೆ ಸಾಗಿಸುತ್ತಿಲ್ಲ. ಬದಲಿಗೆ, ಪಾದಚಾರಿ ಮಾರ್ಗದ ಪಕ್ಕದಲ್ಲೇ ಎಸೆದು ಹೋಗುತ್ತಿದ್ದಾರೆ. ಹೀಗಾಗಿ ಕೋಟೆ ಕೆರೆ ಆವರಣವೀಗ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ ಎಂಬುದು ಜನರ ಆರೋಪ.

    ಸೊಳ್ಳೆಗಳ ಕಾಟ: ಚರಂಡಿ ಸಮೀಪ ನಮ್ಮ ಮನೆಗಳಿವೆ. ಚರಂಡಿಯಲ್ಲಿನ ತ್ಯಾಜ್ಯ ಪದಾರ್ಥ ಸರಾಗವಾಗಿ ಮುಂದೆ ಹರಿದುಹೋಗುತ್ತಿಲ್ಲ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಕಾಡುತ್ತಿದೆ ಎಂದು ಶಿವಾಜಿ ನಗರ 6ನೇ ಕ್ರಾಸ್ ನಿವಾಸಿಗಳಾದ ಜ್ಯೋತಿ ಹೆದ್ದೂರಶೆಟ್ಟಿ, ಇಲಿಯಾಸ್ ಚೌಧರಿ, ಗಿರೀಶ ಕಿಲ್ಲೇಕರ ಅಳಲು ತೋಡಿಕೊಂಡಿದ್ದಾರೆ ಕಳೆದ ವರ್ಷ ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗಿ ಕೊಳಚೆ ನೀರು ನಮ್ಮ ಮನೆಗಳಿಗೆ ನುಗ್ಗಿತ್ತು. ಈ ಬಾರಿ ಮಳೆಗಾಲ ಸಮೀಪಿಸುತ್ತಿದ್ದರೂ, ಚರಂಡಿ ಸ್ಥಿತಿ ಬದಲಾಗದ್ದರಿಂದ ಮತ್ತೆ ಆತಂಕ ಶುರುವಾಗಿದೆ. ಅಧಿಕಾರಿಗಳು ಕೂಡಲೇ ಇಲ್ಲಿರುವ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

    ಕೋಟೆ ಕೆರೆ ಆವರಣದಲ್ಲಿ ಪಾದಚಾರಿ ಮಾರ್ಗದ ಪಕ್ಕ ಬಿದ್ದಿರುವ ತ್ಯಾಜ್ಯ ಪದಾರ್ಥಗಳನ್ನು ತಕ್ಷಣ ಬೇರೆಡೆ ಸಾಗಿಸಲು ಕ್ರಮಕೈಗೊಳ್ಳಲಾಗುವುದು. ಚರಂಡಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು. ಸ್ಥಳೀಯರು, ವಾಯು ವಿಹಾರಿಗಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಡಾ.ಸಂಜಯ ಡುಮ್ಮಗೋಳ ಆರೋಗ್ಯಾಧಿಕಾರಿ ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts