More

    ಕೋಟೆನಾಡು ಸಮಗ್ರ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸಿ

    ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಜಯವಾಣಿ-ದಿಗ್ವಿಜಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲೆಗೆ ಬೆಳ್ಳಿ ಸಂಭ್ರಮ, ವಿಜಯವಾಣಿಯ 48 ಪುಟಗಳ ವಿಶೇಷ ಪುರವಣಿ ಬಿಡುಗಡೆ ಹಾಗೂ ಬಾಗಲಕೋಟೆ ಅಂದು-ಇಂದು ಆಹ್ವಾನಿತ ಗಣ್ಯರಿಂದ ಅವಲೋಕನ ಕಾರ್ಯಕ್ರಮ ಗುರುವಾರ ಯಶಸ್ವಿಯಾಗಿ ನಡೆಯಿತು. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗಿಸಲು ಸಾಕಷ್ಟು ಹೋರಾಟಗಳು ನಡೆದಿವೆ. ಎಚ್.ಬಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ನನ್ನ ಒಳಗೊಂಡ ಹೋರಾಟ ಸಮಿತಿ ಹಾಗೂ ಜನರ ಒತ್ತಡಕ್ಕೆ ಮಣಿದು ಜೆ.ಎಚ್.ಪಟೇಲ್ ಸರ್ಕಾರ 1997 ಆಗಸ್ಟ್ 15 ರಂದು ಜಿಲ್ಲೆ ಘೋಷಣೆ ಮಾಡಿತು. ನಗರಸಭೆ, ಬಿಟಿಡಿಎ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಹೊಸ ಜಿಲ್ಲೆಯಾಗಿದೆ ಎನ್ನುವ ಸಂಭ್ರಮ ಇರುವಾಗವೇ ಮುಳುಗಡೆ ನಮ್ಮನ್ನು ನೋವಿನ ಸರಮಾಲೆಗೆ ತಳ್ಳಿತು. ಮಳೆ ಆರ್ಭಟ ನಡುವೆಯೂ ಜೆ.ಎಚ್.ಪಟೇಲ್ ಅವರು ಬಾಗಲಕೋಟೆ ನಗರ ಸಂತ್ರಸ್ತರಿಗೆ ಒಂದೇ ದಿನದಲ್ಲಿ 3 ಸಾವಿರ ನಿವೇಶನಗಳ ಹಕ್ಕು ಪತ್ರ ವಿತರಿಸಿದರು. ತ್ಯಾಗ ಜೀವಿಗಳಾದ ಸಂತ್ರಸ್ತರಿಗೆ ನೆಮ್ಮದಿ, ವ್ಯಾಪಾರ ಬದುಕು ಕಟ್ಟಿಕೊಡಲು ಇಂದಿಗೂ ಸಾಧ್ಯವಾಗಲಿಲ್ಲ. ಸಂತ್ರಸ್ತರ ಬೇಡಿಕೆ ಈವರೆಗೆ ಈಡೇರಿಲ್ಲ. 900 ಎಕರೆ ಪ್ರದೇಶದಲ್ಲಿದ್ದ ಬಾಗಲಕೋಟೆ ಇಂದು 4500 ಎಕರೆ ವಿಸ್ತೀರ್ಣದಷ್ಟಿರುವ ನವನಗರ, ವಿದ್ಯಾಗಿರಿಯಲ್ಲಿ ವಿಸ್ತಾರಗೊಂಡರೂ ವಾಣಿಜ್ಯ ಚಟುವಟಿಕೆ ಬೆಳೆದಿಲ್ಲ. ಜನರಿಗೆ ಉದ್ಯೋಗ ದೊರೆತಿಲ್ಲ. ಆಗಬೇಕಾದ ಕೆಲಸಗಳು ಬೆಟ್ಟದಷ್ಟು ಇವೆ. ಒಟ್ಟಾರೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವಿದು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ನಾವೆಲ್ಲ ಶ್ರಮಿಸಬೇಕಿದೆ ಎಂದು ಹೋರಾಟ ದಿನಗಳನ್ನು ಮೆಲುಕು ಹಾಕಿದರು.

    ಪತ್ರಕರ್ತ ರಾಮ ಮನಗೂಳಿ, ಮಾತನಾಡಿ, ಬಾಗಲಕೋಟೆ ಜಿಲ್ಲೆಗೆ ಭವ್ಯವಾದ ಇತಿಹಾಸವಿದೆ. ಉಪ ವಿಭಾಗವಾಗಿದ್ದ ಬಾಗಲಕೊಟೆ ಸ್ವತಂತ್ರ ಜಿಲ್ಲೆಯಾಗಿ ರೂಪುಗೊಳ್ಳುವಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಟಿ.ಎಂ.ಹುಂಡೇಕಾರ ನೇತೃತ್ವದಲ್ಲಿ ಜಿಲ್ಲಾ ಪುನರ್ ವಿಗಂಡಣಾ ಸಮಿತಿ ರಚಿಸಿತು. ಬೆಳಗಾವಿ ಹೊರತುಪಡಿಸಿ ಉಳಿದ ಭಾಗದಲ್ಲಿ ಸಮಿತಿಯು ಪ್ರತ್ಯೇಕ ಜಿಲ್ಲೆಗೆ ಶಿಫಾರಸು ಮಾಡಿತು. ಇಷ್ಟಾದರೂ ಪ್ರತ್ಯೇಕ ಜಿಲ್ಲೆಯಾಗಲಿಲ್ಲ. 1997ರಲ್ಲಿ ಸಿಎಂ ಜೆ.ಎಚ್.ಪಟೇಲ್ ಸರ್ಕಾರ ನೂತನ ಜಿಲ್ಲೆ ಘೋಷಿಸಿತು. ಹೊಸ ಜಿಲ್ಲೆಯ ಸಂಭ್ರಮಕ್ಕೆ ಮುಳುಗಡೆ ಶಾಪ ತಟ್ಟಿತು. ಪ್ರಗತಿ ಪಥದಲ್ಲಿ ಜಿಲ್ಲೆ ಸಾಗುತ್ತಿದ್ದರೂ ದುಡಿಯುವ ಕೈಗಳಿಗೆ ಕೆಲವಿಲ್ಲದಂತಾಗಿದೆ. ಜನರ ಬದುಕು ಸಂಕಷ್ಟದಲ್ಲಿದೆ. ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯವಾಗಿ ಪ್ರತ್ಯೇಕ ಜಿಲ್ಲೆ ರಚನೆ ಮಾಡಿದ, ಅಭಿವೃದ್ಧಿಗೆ ಮುನ್ನುಡಿ ಬರೆದ ಮಾಜಿ ಸಿಎಂ ಜೆ.ಎಚ್.ಪಟೇಲರ ಹೆಸರಿನಲ್ಲಿ ಸ್ಮಾರಕ, ಪುತ್ಥಳಿ ನಿರ್ಮಿಸುವ ಮೂಲಕ ಅವರನ್ನು ಸ್ಮರಿಸಬೇಕಿದೆ ಎಂದರು.

    ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳ ಜತೆಗೆ ಅಪಾರ ಖನಿಜ ಸಂಪತ್ತು, ಫಲವತ್ತಾದ ಭೂಮಿ ಇದೆ. 12 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿ ವರ್ಷ 1.65 ಲಕ್ಷ ಕೋಟಿ ಟನ್ ಕಬ್ಬು ನುರಿಸಲಾಗುತ್ತಿದೆ. ಜಮಖಂಡಿ ಉಪ ವಿಭಾಗ ಮಾತ್ರ ನೀರಾವರಿಗೆ ಒಳಪಟ್ಟಿದೆ. ಬಾಗಲಕೋಟೆ ಉಪವಿಭಾಗದಲ್ಲಿರುವ ಬಾದಾಮಿ, ಹುನಗುಂದ, ಬಾಗಲಕೋಟೆ ತಾಲೂಕುಗಳು ನೀರಾವರಿಗೆ ಒಳಪಟ್ಟಿಲ್ಲ. ಮಲಪ್ರಭಾ ನದಿಯಲ್ಲಿ ನೀರಿನ ಅಭಾವದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಕಾಳಿ ನದಿಯನ್ನು ಸೋಪಾ ಡ್ಯಾಮ್ ಮೂಲಕ ಮಲಪ್ರಭಾ, ಘಟಪ್ರಭಾ ನದಿಗೆ ಜೋಡಣೆ ಮಾಡಿದಲ್ಲಿ, ಹಿನ್ನೀರು ಸಮರ್ಪಕವಾಗಿ ಬಳಕೆಯಾದಲ್ಲಿ ಜಿಲ್ಲೆಯೂ 12 ತಿಂಗಳು ಸಂಪೂರ್ಣ ನೀರಾವರಿಗೆ ಒಳಪಡಲಿದೆ. ಕಾಳಿ ನದಿ ಜೋಡಣೆ ಕುರಿತು ನಿರಾಣಿ ಫೌಂಡೇಷನ್ ಮೂಲಕ 25 ಲಕ್ಷ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಯಿತು. ಸರ್ಕಾರವು ಕೂಡ ಬಜೆಟ್‌ನಲ್ಲಿ ಇದಕ್ಕೆ ಪ್ರತ್ಯೇಕ ಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದರು.

    ನೀರಾವರಿ ವರವೂ ಹೌದು, ಶಾಪವೂ ಹೌದು. ಜಮಖಂಡಿ ಉಪ ವಿಭಾಗದಲ್ಲಿ 50 ಸಾವಿರ ಎಕರೆ ಪ್ರದೇಶ ಸವಳು-ಜವಳಿಗೆ ತುತ್ತಾಗಿದೆ. ಅದರಿಂದ ಮುಕ್ತಿಗೊಳಿಸಲು ಪ್ರಯತ್ನ ಮಾಡಬೇಕಿದೆ ಎಂದರು.

    ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಬಾಗಲಕೋಟೆ ಜಿಲ್ಲೆ ರಚನೆಯಾಗುವ ಸಂದರ್ಭದಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದೆ. ಹಲವು ಹೋರಾಟ ಬಳಿಕ ಸ್ವತಂತ್ರ ಜಿಲ್ಲೆಯ ಸ್ಥಾನಮಾನ ಪಡೆಯಿತು. ಬಾಗಲಕೋಟೆ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎನ್ನುವುದನ್ನು ಒಪ್ಪುವದಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಆದರೆ, ಸಂತ್ರಸ್ತರು, ರೈತರು, ನೇಕಾರ ಸಮಸ್ಯೆಗೆ ಪೂರ್ಣ ವಿರಾಮ ನೀಡಲು ಸಾಧ್ಯವಾಗಿಲ್ಲ ಎನ್ನುವ ಕೊರಗೂ ಇದೆ. ಬಾಗಲಕೋಟೆ ನಗರ ಅಭಿವೃದ್ಧಿಗೆ ನಮ್ಮ ಸರ್ಕಾರವಿದ್ದಾಗ 133 ಕೋಟಿ ರೂ., ನಗರೋತ್ಥಾನ -3 ಅಡಿಯಲ್ಲಿ 30 ಕೋಟಿ ರೂ. ನೀಡಲಾಯಿತು. ಮೆಡಿಕಲ್ ಕಾಲೇಜು ಘೋಷಣೆ ಮಾಡಲಾಯಿತು. ಆದರೆ, ಅಷ್ಟರಲ್ಲಿ ಸರ್ಕಾರದ ಅವಧಿ ಮುಗಿಯಿತು. ಹೀಗೆ ಸರ್ಕಾರಗಳು ಬದಲಾದ ಸಂದರ್ಭದಲ್ಲಿ ಅನೇಕ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ಮೊಟಕುಗೊಳ್ಳುತ್ತವೆ. ನಿರ್ದಿಷ್ಟವಾದ ರೂಪರೇಷೆ ಮೂಲಕ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದರು.

    ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ ಮಾತನಾಡಿ, ಬಾಗಲಕೋಟೆ ನಗರ ತನ್ನ ಗತ ವೈಭವಕ್ಕೆ ಮರಳಬೇಕಿದೆ. ಇಲ್ಲಿನ ಶರಣ ಪರಂಪರೆ, ತತ್ವಗಳು ಮುಂದಿನ ಪೀಳಿಗೆ ಜನರಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಜಿಲ್ಲೆಯಲ್ಲಿ ಬಸವ ಭವನ, ಬಸವ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

    ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕಲೆ, ಸಾಹಿತ್ಯ, ರಂಗಭೂಮಿ, ಸಂಸ್ಕೃತಿ, ಜನಪದ ತವರೂರು ಬಾಗಲಕೋಟೆ ಜಿಲ್ಲೆ. 365 ದಿನಗಳು ಇಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತವೆ. ಸಾಂಸ್ಕೃತಿಕ ವಾರಸುದಾರರಾದ ಕಲಾವಿದರು, ಸಾಹಿತಿಗಳು ಕೋವಿಡ್ ಬಳಿಕ ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಅಲ್ಲದೆ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜನೆ ಮಾಡುತ್ತಿದೆ. 25 ವರ್ಷದ ಬೆಳ್ಳಿ ಮಹೋತ್ಸವ ಸಂದರ್ಭದಲ್ಲಿ ಜಿಲ್ಲೆಗಾಗಿ 25 ರಚನಾತ್ಮಕ ಪುಸ್ತಕಗಳನ್ನು ಪ್ರಕಟಿಸಲು ನಿರ್ಧರಿಸಿದೆ. ಕಳೆದ ಒಂದು ತಿಂಗಳಿಂದ ಸಾಹಿತ್ಯ,ಕವಿ ಗೋಷ್ಠಿ, ಚಿಂತನ, ಮಂಥನ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ ಹೇಳಿದರು.

    ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಸಂಗಮೇಶ ಸಣ್ಣತಂಗಿ, ಬಿ.ಎಸ್.ಪವಾಡಿಶೆಟ್ಟರ, ಸಿ.ಎಂ.ಜೋಶಿ, ಕವಿ ಸತ್ಯಾನಂದ ಪಾತ್ರೋಟ, ಡಾ.ಪ್ರಕಾಶ ಖಾಡೆ, ಲೇಖಕ ಮಹಾಬಳೇಶ್ವರ ಗುಡಗುಂಟಿ, ಅಕ್ಕನ ಬಳಗದ ವಿಜಯಲಕ್ಷ್ಮೀ ಭದ್ರಶೆಟ್ಟಿ, ಶಿವ ದಾಸಿಮಯ್ಯ ಮಹಿಳಾ ಮಂಡಳದ ಗಿರಿಜಾ ಪಾವಟೆ, ಸರೋಜನಿ ಗಂಗಾವತಿ, ಕದಳಿ ವೇದಿಕೆಯ ಉಮಾ ರೇವಡಿಗಾರ, ಕಸ್ತೂರಿ ಭದ್ರಶೆಟ್ಟಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಯಮನೂರಪ್ಪ, ಮುಖಂಡರಾದ ರಮೇಶ ಬದ್ನೂರ, ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ, ಚಂದ್ರಶೇಖರ ಬ್ಯಾಳಿ, ಸಂತೋಷ ಜಕಾತಿ, ಶರಣು ಹುರಕಡ್ಲಿ, ನಾಗರಾಜ ಹದ್ಲಿ, ಹನುಮಂತ ರಾಕುಂಪಿ, ಮಂಜುನಾಥ ಪುರತಗೇರಿ, ಗುರುರಾಜ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಾಗಲಕೋಟೆ ತಾಲೂಕು ಅಧ್ಯಕ್ಷೆ ಗೀತಾ ದಾನಶೆಟ್ಟಿ, ನಿರ್ಮಲಾ ಲೂತಿಮಠ, ಮಂಜುಳಾ ಅಂಗಡಿ ಪ್ರಾರ್ಥಿಸಿದರು. ಅಶೋಕ ಶೆಟ್ಟರ ನಿರೂಪಿಸಿದರು. ಕಸಾಪ ಬಾಗಲಕೋಟೆ ತಾಲೂಕು ಘಟಕದ ಅಧ್ಯಕ್ಷ ಪಾಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ದರಾಮ ಶಿರೋಳ ವಂದಿಸಿದರು.

    ಮನ ಸಳೆದ ಕಾರ್ಯಕ್ರಮ
    ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಹಾಗೂ ಕುಟುಂಬದ ಬಗ್ಗೆ ವೇದಿಕೆ ಮೇಲೆ ಇದ್ದ ಗಣ್ಯರು ಗುಣಗಾನ ಮಾಡಿದರು. ತಮ್ಮ ಕಾರ್ಯ ಸಾಧನೆ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಡಾ.ವಿಜಯ ಸಂಕೇಶ್ವರ ಬಾಗಲಕೋಟೆಯ ಅಳಿಯಂದಿರು ಎನ್ನುವುದು ಹೆಮ್ಮೆಯ ಸಂಗತಿ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಾಜಿ ಸಚಿವ ಎಚ್.ವೈ.ಮೇಟಿ, ಎ.ಎಸ್.ಪಾವಟೆ ಸೇರಿದಂತೆ ಇತರರು ಸ್ಮರಿಸಿದರು. ಅಲ್ಲದೆ, ವೆಂಕಪ್ಪ ಸುಗತೇಕರ, ಚೇತನ ಸುಗತೇಕರ ತಂಡದ ಗೋಂದಳಿ ಪದ ಹಾಡು, ಬಸವರಾಜ ಬಳ್ಳೊಳ್ಳಿ ಹಾಗೂ ಸಂಗಡಿಗರ ತತ್ವ ಪದಗಳು ಗಮನ ಸೆಳೆದವು. ಕಸಾಪ ಜಿಲ್ಲಾ ಘಟಕದಿಂದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.


    ಯಾವುದೇ ಸರ್ಕಾರವಿರಲಿ ಜಿಲ್ಲೆಯ ಅಭಿವೃದ್ಧಿಗೆ ಪಣತೊಡಬೇಕಿದೆ. 25 ವರ್ಷ ತುಂಬಿದ ಸಂದರ್ಭದಲ್ಲಿ ಸರ್ಕಾರದಿಂದ ಸಂಭ್ರಮದ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು. ಆದರೆ, ಯಾವುದೂ ಆಗಲಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಆಗಬೇಕು. ಜಿಲ್ಲೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು.
    ರಕ್ಷಿತಾ ಭರತಕುಮಾರ ಈಟಿ, ಮುಖಂಡರು

    ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಬಂದರೂ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಿಲ್ಲ ಎನ್ನುವ ಯಕ್ಷ ಪ್ರಶ್ನೆ ಕಾಡತೊಡಗಿದೆ. ಮುಳುಗಡೆಯಾದ ಬಳಿಕ ಬಾಗಲಕೋಟೆಯ ವ್ಯಾಪಾರ ಚಟುವಟಕೆ ಚೇತರಿಸಿಕೊಂಡಿಲ್ಲ. ಮಾರುಕಟ್ಟೆ ವ್ಯವಸ್ಥೆ ಮರು ಸ್ಥಾಪಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಮುಳುಗಡೆ ನಗರಿಯಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ಪ್ರೋತ್ಸಾಹ, ಬೆಂಬಲದ ಕೊರತೆ ಇದೆ.
    ರವಿ ಕುಮಟಗಿ ಉದ್ಯಮಿಗಳು

    ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಕೊರತೆ ಇಲ್ಲ. ಕಲಾವಿದರು, ಸಾಹಿತಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆಯಾದ ಬಳಿಕ ಜಿಲ್ಲೆಯ ತೋಟಗಾರಿಕಾ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. ಸಮಗ್ರ ಕೃಷಿ ಪದ್ಧತಿ, ಅಂತರ ಬೆಳೆ ಪದ್ಧತಿ ಅನುಷ್ಠಾನಗೊಂಡಿದೆ.
    ಉಮಾ ಅಕ್ಕಿ ತೋವಿವಿ ಪ್ರಾಧ್ಯಾಪಕರು

    ಮುಳುಗಡೆ, ಕೋವಿಡ್ ಬಳಿಕ ಜಿಲ್ಲೆಯಲ್ಲಿ ಆರ್ಥಿಕ ಕುಸಿತವಿದೆ. ಇದನ್ನು ಮೇಲಕ್ಕೆ ಎತ್ತುವ ಪ್ರಯತ್ನವಾಗಬೇಕು. ಉದ್ಯಮಗಳು ಹೆಚ್ಚು ಸ್ಥಾಪನೆಗೊಳ್ಳಬೇಕು. ರೈತರು, ಕಾರ್ಮಿಕರು, ನೇಕಾರರ ಬಾಳು ಹಸನಗೊಳ್ಳಬೇಕು. ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ.
    ಈಶ್ವರಪ್ಪ ಕೋನಪ್ಪನವರ

    ಜಿಲ್ಲೆಯಲ್ಲಿ ನೀರು, ನೀರಾವರಿ, ಉದ್ಯಮ ಸ್ಥಾಪನೆ ಕುರಿತು ಗಮನ ಹರಿಸಬೇಕಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಶ್ರೀಸಾಮಾನ್ಯರು ಕೂಡ ಉದ್ಯಮ ಸ್ಥಾಪಿಸಲು ಕೈಗಾರಿಕೆ ಪ್ರದೇಶದಲ್ಲಿ ಭೂಮಿ ಹಂಚಿಕೆಯಾಗಬೇಕು. ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ನೆಮ್ಮದಿ ಬದುಕು ಕಟ್ಟಿಕೊಡಬೇಕು.
    ಬಸವರಾಜ ಧರ್ಮಂತಿ ಕರವೇ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts