More

    ಕೋಟೆನಾಡಿನಲ್ಲಿ ವರುಣನ ಆರ್ಭಟ

    ಚಿತ್ರದುರ್ಗ: ಕೋಟೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬುಧವಾರವೂ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಯಿತು. ಹೀಗಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.

    ಕೆಲ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ. ತಗ್ಗು ಪ್ರದೇಶದ ಮನೆ, ಅಂಗಡಿ, ತೋಟಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಯಿತು.

    ಬೆಳಗ್ಗೆಯೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮಧ್ಯಾಹ್ನ 3ರ ನಂತರ ಜಿಲ್ಲೆಯ ಕೆಲ ಭಾಗಗಳಲ್ಲಿ ವರುಣಾಗಮನವಾಯಿತು. ಚಿತ್ರದುರ್ಗ ನಗರದಲ್ಲಿ ಸಂಜೆ 4.30ಕ್ಕೆ ಜಿಟಿಜಿಟಿಯಾಗಿ ಆರಂಭವಾಗಿ 5ರಿಂದ ರಾತ್ರಿ 9ರವರೆಗೂ ಆಗಿಂದಾಗ್ಗೆ ಬಿರುಸಿನ ಮಳೆಯಾಯಿತು.

    ಗುಡುಗು-ಮಿಂಚಿನ ಆರ್ಭಟ ಜೋರಾಗಿದ್ದ ಪರಿಣಾಮ ಹೊಲ, ತೋಟಗಳಲ್ಲಿ ಕೆಲಸ ಮಾಡಲು ಹೋದವರು ಅಲ್ಲಿಯೇ ಕೆಲಕಾಲ ಉಳಿಯುವ ಸ್ಥಿತಿ ನಿರ್ಮಾಣವಾಯಿತು. ಕೆಲಸ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಬಂದವರು ಕೂಡ ಊರು ಸೇರಲು ಹಲವರು ಹರಸಾಹಸ ಪಟ್ಟರು.

    ನುಗ್ಗಿದ ಕೊಳಚೆ ನೀರು: ಇದ್ದಕ್ಕಿದ್ದಂತೆ ರಭಸವಾಗಿ ಸುರಿದ ಮಳೆಯಿಂದಾಗಿ ಕೆಳಗೋಟೆ, ನೆಹರು ನಗರ, ಚೇಳುಗುಡ್ಡ, ಕೋಟೆ ರಸ್ತೆಯ ಕೆಳಭಾಗ, ಅಗಳೇರಿ, ಬುದ್ಧನಗರ, ಸಂತೆಹೊಂಡ ಸೇರಿ ವಿವಿಧ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೂ, ಅಂಗಡಿಗಳಿಗೂ ಕೊಳಚೆ ನೀರು ನುಗ್ಗಿತು. ಹೊರಹಾಕಲು ನಾಗರಿಕರು ಹೈರಾಣಾದರು.

    ಕೆಲವೇ ನಿಮಿಷಗಳಲ್ಲಿ ತುರುವನೂರು ರಸ್ತೆ, ಜೆಸಿಆರ್ ರಸ್ತೆ ಒಳಗೊಂಡು ಹಲವೆಡೆಗಳ ಕೆಳ ಸೇತುವೆಗಳ ಬಳಿ ಜಲಾವೃತ ನಿರ್ಮಾಣವಾಯಿತು. ಕೆಲಕಾಲ ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿದ ಪರಿಣಾಮ ದುರ್ವಾಸನೆ ಬೀರಿದ್ದು, ನಾಗರಿಕರಿಗೆ ಕಿರಿಕಿರಿ ಉಂಟಾಯಿತು.

    ಧರೆಗುರುಳಿದ್ದ ವಿದ್ಯುತ್ ಕಂಬಗಳು: ಸೋಮವಾರ ಸುರಿದ ಭಾರಿ ಮಳೆಗೆ ನಗರ ವ್ಯಾಪ್ತಿಯಲ್ಲಿ ಮೂರ್ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಬುಧವಾರ ನೂತನ ಕಂಬ ಮತ್ತು ತಂತಿಯೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಸಿಬ್ಬಂದಿ ನಿರತರಾದರು.

    ವಿದ್ಯುತ್ ಸಂಪರ್ಕಿಸುವ ಕೆಲ ಮಾರ್ಗಗಳಲ್ಲಿ ಸಮಸ್ಯೆಯಾದ ಪರಿಣಾಮ ಕೆಲ ಭಾಗಗಳಲ್ಲಿ ಸಾಕಷ್ಟು ಹೊತ್ತು ವಿದ್ಯುತ್ ವ್ಯತ್ಯಯವಾಯಿತು.

    24 ಮನೆಗಳು ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಯಿಂದಾಗಿ ಹೊಸದುರ್ಗ ತಾಲೂಕಿನಲ್ಲಿ 17, ಹೊಳಲ್ಕೆರೆ-5, ಮೊಳಕಾಲ್ಮುರು-2 ಸೇರಿ ಜಿಲ್ಲೆಯಲ್ಲಿ ಒಟ್ಟು 24 ಮನೆಗಳು ಭಾಗಶಃ, 1 ಸಣ್ಣ ಜಾನುವಾರುವಿಗೆ ಹಾನಿಯಾಗಿದೆ. ಹೊಸದುರ್ಗದಲ್ಲಿ 26.4 ಮಿ.ಮೀ ಆಗಿದ್ದು, ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ. ರಾಮಗಿರಿ 24.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts