More

    ಕೋಟೆನಾಡಲ್ಲಿ ಮೊಳಗಿದ ಕೋಟಿ ಕಂಠ ಗಾಯನ

    ಬಾಗಲಕೋಟೆ: ೬೭ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕೋಟಿ ಕಂಠಗಳ ಗೀತ ಗಾಯನ ಕಾರ್ಯಕ್ರಮ ಕೋಟೆನಾಡಲ್ಲಿ ಸಂಭ್ರಮದಿಂದ ಜರುಗಿತು.
    ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಪಾಲ್ಗೊಂಡು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡ ಕಳೆಗಟ್ಟುವಂತೆ ಮಾಡಿದರು.
    ಅಮೀನಗಡದ ಈಸ್ವರ ಮೆಲೋಡಿಸ್ ಗಾಯಕರ ನೇತೃತ್ವದ ತಂಡದೊಂದಿಗೆ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಹುಯಿಲಗೋಳ ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ೬ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.
    ಕನ್ನಡ ಗೀತ ಗಾಯನ ಮೊಳಗುತ್ತಿದ್ದಂತೆ ಈಡೀ ಜಿಲ್ಲಾಡಳಿತ ಭವನದಲ್ಲಿ ಕನ್ನಡ ಡಿಂ ಡಿಂ ಕಳೆಗಟ್ಟಿತು. ಎರಡು ಸಾವಿರಕ್ಕೂ ಹೆಚ್ಚು ಜನ ಹಾಡುವ ಮೂಲಕ ನಾಡು-ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು. ವಿವಿಧ ಶಾಲಾ ಮಕ್ಕಳು ಸಾಮೂಹಿಕ ಗಾಯನದಲ್ಲಿ ಪಾಲ್ಗೊಂಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟರು. ಕೋಟಿ ಕಂಠ ಗಾಯನದಲ್ಲಿ ಕೊನೆಯದಾಗಿ ಮೊಳಗಿದ ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಕ್ಕಳೆಲ್ಲರೂ ಧ್ವನಿ ಕೂಡಿಸಿ ಸಾಥ್ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಕುರಿತು ಸಂಕಲ್ಪ ವಿಧಿಯನ್ನು ಬೋಧಿಸಿದರು. ಕನ್ನಡ ನಾಡಿನ ಪ್ರಜೆಯಾಗಿ ನಾನು ನನ್ನ ನಾಡು, ನುಡಿಗಳನ್ನು ಪ್ರೀತಿಸುವದರ ಜೊತೆಗೆ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ ಎಂದು ಪಣ ತೊಡತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ದನಾಗಿರುತ್ತೇನೆ. ವಾಸಿಸುವ ಕನ್ನಡೇತರ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಸಂಕಲ್ಪ ವಿಧಿಯನ್ನು ಸ್ವೀಕರಿಸಿದರು. ಆರ್.ಎಂ.ಎಸ್‌ನ ಉಪಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಸ್ವಾಗತಿಸಿ ಕೊನೆಗೆ ವಂದಿಸಿದರು.

    ಕೋಟಿ ಕಂಠ ಗಾಯನ ವಿದೇಶಿ ಪ್ರವಾಸಿಗರ ಕಲರವ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಐತಿಹಾಸಿಕ ಪಟ್ಟದಕಲ್ಲಿನಲ್ಲಿ ಜರುಗಿದ ಕೋಟಿ ಕಂಠ ಗಾಯನದಲ್ಲಿ ಪ್ರವಾಸಕ್ಕೆಂದು ಆಗಮಿಸಿದ ವಿದೇಶಿ ಜೋಡಿಗಳು ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು. ವಿದೇಶಿ ಜೋಡಿಗಳ ಕಂಠ ಧ್ವನಿಯಲ್ಲಿಯೂ ಕನ್ನಡ ಮೊಳಗಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts