More

    ಕೋಟೆನಾಡಲ್ಲಿ ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

    ಬಾಗಲಕೋಟೆ: ನಾಡ ಹಬ್ಬದ ದಸರಾ ಒಂಬತ್ತು ದಿನಗಳ ಕಾಲ ಆಚರಿಸುವ ನವರಾತ್ರಿ ಉತ್ಸವಕ್ಕೆ ಕೋಟೆನಾಡಲ್ಲಿ ಗುರುವಾರ ಸಂಭ್ರಮದಿಂದ ತೆರೆ ಬಿದ್ದಿತು. ದೇವಸ್ಥಾನ, ಮಂದಿರ ಮತ್ತು ಆಚರಣೆ, ಪದ್ಧತಿ ಇರುವ ವಿವಿಧ ಮನೆ ಮನೆಗಳಲ್ಲಿ ಘಟಸ್ಥಾಪನೆ ಮಾಡಿ ಹಾಕಲಾಗಿದ್ದ ದೀಪಾರಾಧನೆಗೆ ಮಂಗಳ ಹಾಡಲಾಯಿತು.
    ಒಂಬತ್ತು ದಿನಗಳಕಾಲ ನವ ಶಕ್ತಿ ದೇವತೆಗಳ ಮೂರ್ತಿಗೆ, ಲಕ್ಷ್ಮೀ ವೆಂಕಟೇಶ್ವರ, ಲಕ್ಷ್ಮೀ ನರಸಿಂಹ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಅರಿಶಿನ ಕುಂಕುಮಾರ್ಚನೆ, ಅಭಿಷೇಕ, ಪಂಚಾಮೃತ ಅರ್ಪಣೆ ಮಾಡಿ ಸ್ತೋತ್ರಗಳನ್ನು ಪಠಿಸಲಾಯಿತು. ಪ್ರತಿ ನಿತ್ಯವು ಬೆಳಗ್ಗೆ ಮತ್ತು ಸಂಜೆ ಜಾಗಟೆ, ರಥೋತ್ಸವ ಮಂತ್ರಘೋಷಗಳು ಮೊಳಗಿದವು. ನೂರಾರು ಭಕ್ತರು ಉಪಾವಾಸ ವೃತ ಕೈಗೊಂಡು ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಸೇರಿ ಭಜನೆ, ಗೀತನಾದ, ವಾದ್ಯ ಗಳ ಸೇವೆ ಹಾಗೂ ನೃತ್ಯಗಳನ್ನು ಮಾಡಿದರು. ಜಿಲ್ಲೆಯಾದ್ಯಂತ ದಸರಾ ಸಡಗರ ಕಳೆಗಟ್ಟಿತ್ತು.
    ಬಾಗಲಕೋಟೆ ನಗರದ ಕಿಲ್ಲಾದಲ್ಲಿರುವ ಲವಂಗಿಮಠದ ಹತ್ತಿರ ಹಾಗೂ ಮಾರವಾಡಿಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು . ನಿರಂತರ ಒಂಬತ್ತು ದಿನಗಳ ಕಾಲ ಪೂಜಿಸಲಾಯಿತು. ಪ್ರತಿದಿನ ದೇವಿಯ ವಿವಿಧ ರೂಪಗಳನ್ನು ವಿಶೇಷವಾಗಿ ಶೃಂಗರಿಸಿ ಆರಾಧಿಸಿಲಾಯಿತು.
    ಕೌಲಪೇಟ ಹಾಗೂ ವೆಂಕಟಪೇಟದಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ ಮತ್ತು ಎಂ.ಜಿ.ರೋಡನಲ್ಲಿರುವ ಅಂಬಾಭವಾನಿ ದೇವಸ್ಥಾನ, ನವನಗರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ವಿದ್ಯಾಗಿರಿ ವಿಪ್ರಮಠದಲ್ಲಿ, ನಾರಾಯಣ ದೇವರ ಮಂದಿರದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷವಾಗಿ ಪೂಜೆ ಜರುಗಿದವು. ಧಾರ್ಮಿಕ ಪಂಡಿತರಿಂದ ಪುರಾಣ ಪ್ರವಚನ ನಡೆಯಿತು. ಭಕ್ತರು ಉರುಳು ಸೇವೆ, ವಿವಿಧ ರೀತಿಯ ಅಲಂಕಾರ, ವೆಂಕಟೇಶ-ಪದ್ಮಾವತಿ ಕಲ್ಯಾಣೋತ್ಸವ ಕೊನೆಯ ದಿನ ಪಲ್ಲಕ್ಕಿ ಉತ್ಸವ, ರಥೋತ್ಸವ ಅದ್ದೂರಿಯಾಗಿ ನಡೆದವು.

    ಬುಧವಾರ ಆಯುಧ ಪೂಜೆ ನೆರವೇರಿಸಲಾಯಿತು. ನಗರದ ಬಹುತೇಕ ವ್ಯಾಪಾರಸ್ಥರು ತಮ್ಮ ದೈನಂದಿನ ಸಾಮಾನು ಸಲಕರಣೆ, ಆಯುಧಗಳನ್ನು ಶುಚಿಗೊಳಿಸಿ ಪೂಜಿಸಿದರು. ಲಕ್ಷೀ ಪೂಜೆ ನೆರೆವೇರಿಸಿ ಕುಂಬಳಕಾಯಿ ಒಡೆದರು. ಗುರುವಾರ ಸಂಜೆ ಬಂದು ಬಾಂಧವರೊಂದಿಗೆ, ಆತ್ಮೀಮಿಯರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು. ಪರಸ್ಪರ ಶುಭಾಶಯ ಹಚ್ಚಿಕೊಂಡು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

    ಬಂಗಾರದಂಗ ಇರೋನು.. !
    ಗುರುವಾರ ಸಂಜೆ ಆಗುತ್ತಿದ್ದಂತೆ ಬನ್ನಿಯನ್ನು ಮೊದಲು ದೇವರಿಗೆ ಅರ್ಪಿಸಿ ನಂತರ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು. ಎಲ್ಲರ ಬಾಯಲ್ಲೂ `ಬನ್ನಿ ತೋಗೊಂಡ ಬಂಗಾರದಂಗ ಇರೋನ’ ಎನ್ನುವ ವಾಡಿಕೆಯ ಶಬ್ಧ ಹೇಳುತ್ತಾ ಸಂತಸದಿಂದ ಹಬ್ಬ ಆಚರಿಸಿದರು. ಕಿರಿಯರು ಹಿರಿಕರಿಗೆ ಬನ್ನಿ ಕೊಟ್ಟು ಆಶಿರ್ವಾದ ಪಡೆದರು. ಬಿಗಿದಪ್ಪಿ ಹಬ್ಬದ ಶಭಾಷಯ ಕೋರಿದರು. ಉತ್ತರ ಭಾರತಕ್ಕೆ ಮಾತ್ರ ಸಿಮೀತವಾಗಿದ್ದ ದಾಂಡಿಯಾ ರಂಗೂ ಇದೀಗ ಈ ಭಾಗದಲ್ಲಿ ತನ್ನ ಪ್ರಭಾವವನ್ನು ಬೀರುತ್ತಿದೆ. ಕೆಲವೇ ಸಮುದಾಯದವರು ಆಡುತ್ತಿದ್ದ ದಸರಾ ದಾಂಡಿಯಾ ನೃತ್ಯಕ್ಕೆ ಸರ್ವ ಸಮುದಾಯದವರು ಭಾಗವಹಿಸಿದರು. ಜನರು ವಿವಿಧ ಸಾಮಾನುಗಳ ಖರೀದಿಸಲು ಅಂಗಡಿಗಳಿಗೆ ಮುಗಿ ಬಿದ್ದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts