More

    ಕೋಟೆನಗರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ತನ್ನಿ

    ಚಿತ್ರದುರ್ಗ: ಪ್ರಸಕ್ತ ಸಾಲಿನಿಂದಲೇ ಕೋಟೆನಗರಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರಂಭವಾಗುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಳಗೊಂಡು ಸಂಸ್ಥೆಯ ಎಲ್ಲರೂ ಶ್ರಮಿಸೋಣ ಎಂದು ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾಜ್ ಸಲಹೆ ನೀಡಿದರು.

    ಕಾಲೇಜಿಗೆ ಮೊದಲ ವರ್ಷಕ್ಕೆ ಪ್ರವೇಶಾತಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಿಪಂ ಸಭಾಂಗಣದಲ್ಲಿ ಗುರುವಾರ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪುನಃಶ್ಚೇತನ ತರಗತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಾಲ್ಲೂಕಿನ ಗುಡ್ಡದರಂಗವ್ವನ ಹಳ್ಳಿಯ ದಾವಣಗೆರೆ ವಿವಿ ಸ್ನಾತಕೋತ್ತರ ಕೇಂದ್ರ ಜ್ಞಾನ ಗಂಗೋತ್ರಿ ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ತರಗತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಯೋಗಾಲಯಗಳು ಸಿದ್ಧವಾಗಿವೆ. ಶೀಘ್ರದಲ್ಲೇ ವಿದ್ಯಾರ್ಥಿಗಳು ಅಲ್ಲಿಗೆ ಪ್ರವೇಶಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ವಸತಿನಿಲಯ ಸೌಲಭ್ಯ ಕಲ್ಪಿಸುವ ಅಗತ್ಯವಿರುವ ಕಾರಣ ಆರಂಭದ ಕೆಲ ದಿನ ತಾತ್ಕಾಲಿಕವಾಗಿ ಆನ್‌ಲೈನ್ ತರಗತಿಗೆ ಅನುಮತಿ ಪಡೆಯಲಾಗಿದೆ. ಇನ್ನಷ್ಟು ಸಿದ್ಧತೆಗಾಗಿ ಅನುದಾನದ ಅಗತ್ಯವಿದ್ದು, ಸಂಸ್ಥೆ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ವೈದ್ಯಕೀಯ ಕಾಲೇಜು ಮುಂಜೂರಾದ ಬಳಿಕ ಕಾರ್ಯಾರಂಭಕ್ಕೂ ಸಾಕಷ್ಟು ಕಾಲಾವಕಾಶ ಹಿಡಿಯಿತು. ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಎಂಎಲ್ಸಿ, ಜಿಲ್ಲಾಡಳಿತದ ಸಹಕಾರದಿಂದ ಆರಂಭವಾಗುತ್ತಿದೆ. 150 ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಸಂತಸ ಉಂಟು ಮಾಡಿದೆ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಾಲೇಜು ದಾರಿದೀಪವಾಗಲಿದೆ ಎಂದು ಅಭಿಪ್ರಾಯಪಟ್ಟರು.

    ರಾಷ್ಟ್ರೀಯ ವೈದ್ಯಕೀಯ ಮಂಡಳಿ ರೂಪಿಸಿದ ಮಾರ್ಗಸೂಚಿಯ ಅನ್ವಯ ಪುನಃಶ್ಚೇತನ ತರಗತಿ ನಡೆಸಲಾಗಿದೆ. ಪ್ರಥಮ ವರ್ಷದ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ವೈದ್ಯಕೀಯ ಶಿಕ್ಷಣದ ಮಹತ್ವ, ಪರಿಶ್ರಮದ ಬಗ್ಗೆ ಅರಿತು ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು.

    ಬಸವೇಶ್ವರ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಎನ್.ಬಿ.ಪ್ರಹ್ಲಾದ್ ಮಾತನಾಡಿ, ಐತಿಹಾಸಿಕ ಸ್ಥಳ ಕೋಟೆನಗರಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಸೌಭಾಗ್ಯ ದೊರೆತಿದೆ. ಈ ಅದ್ಭುತ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಥಮ ವರ್ಷದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಡಿಪಾಯದ ಜತೆಗೆ ಬೃಹತ್ ಕಂಬಗಳಾಗಿ ಕಾಲೇಜಿನ ಕೀರ್ತಿ ಬೆಳಗಬೇಕು ಎಂದು ಕಿವಿಮಾತು ಹೇಳಿದರು.

    ರೋಗಿಗಳ ಜೀವ ರಕ್ಷಿಸುವ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವುದೇ ಒಂದು ಪುಣ್ಯದ ಕೆಲಸ. ವೈದ್ಯರಾಗುವ ನಿಮ್ಮ ಕನಸಿಗೆ ಈ ಕಾಲೇಜು ಮೆಟ್ಟಿಲಾಗಲಿದ್ದು, ಉತ್ತಮ ಗುರಿಯೊಂದಿಗೆ ಸಾಗಿ. ಭವಿಷ್ಯದ ಜತೆ ಆರೋಗ್ಯವಂತ ಸಮಾಜ ನಿರ್ಮಿಸುವ ಜವಾಬ್ದಾರಿಯೂ ನಿಮ್ಮೆಲ್ಲರ ಮೇಲಿದೆ ಎಂದು ಸಲಹೆ ನೀಡಿದರು.

    ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾಲೇಜು ಹಾಗೂ ಕೋರ್ಸ್ ಕುರಿತು ಮಾಹಿತಿ ನೀಡಲಾಯಿತು. ಸಹಾಯಕ ಆಡಳಿತಾಧಿಕಾರಿ ಡಾ.ಶಿವಾಗ ನಾಯ್ಕ, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ನಾರಾಯಣಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts