More

    ಕೋವಿಡ್​ನಿಂದಾಗುವ ಮರಣ ಪ್ರಮಾಣ ತಗ್ಗಿಸಿ

    ಹುಬ್ಬಳ್ಳಿ: ಧಾರವಾಡದಲ್ಲಿ ಕೋವಿಡ್ ಮರಣ ಪ್ರಮಾಣ ಶೇ. 1.70ರಷ್ಟು ಇದೆ. ರಾಜ್ಯದ ಸರಾಸರಿಗೆ ಹೋಲಿಸಿದರೆ ಜಿಲ್ಲೆಯ ಪ್ರಮಾಣ ಹೆಚ್ಚು ಇದೆ. ಮರಣ ದರ ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಧಾರವಾಡ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
    ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸೋಂಕು ಪತ್ತೆ ಆದ ತಕ್ಷಣ ನಿಗಾ ವಹಿಸಿ ಚಿಕಿತ್ಸೆ ನೀಡಿ. ಹಳ್ಳಿಗಳಲ್ಲಿ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ. ಅವರನ್ನು ಮನೆಯಲ್ಲಿ ಇರಲು ಬಿಡಬೇಡಿ ಎಂದರು.
    ಕೋವಿಡ್ 3ನೇ ಅಲೆ ವಿಷಯದಲ್ಲಿ ಸರ್ಕಾರ ವಿಶೇಷ ಗಮನ ಹರಿಸಿದೆ. ಧಾರವಾಡ ಜಿಲ್ಲೆಯಲ್ಲಿ 600 ಕೋವಿಡ್ ಬೆಡ್​ಗಳನ್ನು ಮಕ್ಕಳಿಗಾಗಿ ಸಿದ್ಧಪಡಿಸಲಾಗಿದೆ. ಕೋವಿಡ್ ಲಸಿಕೆ ನೀಡುವಿಕೆ ತೀವ್ರಗೊಳಿಸಿ. ಬ್ಲ್ಯಾಕ್ ಫಂಗಸ್ ಸಾವು ತಡೆಯಿರಿ ಎಂದರು.
    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಅಕ್ಕಪಕ್ಕದ 13 ಜಿಲ್ಲೆಗಳಿಂದ ಕೋವಿಡ್ ಗಂಭೀರ ಸ್ಥಿತಿ ತಲುಪಿದ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಸೇರಿ ಇತರ ಆಸ್ಪತ್ರೆಗಳಿಗೆ ದಾಖಲಿಸುತ್ತಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಮರಣದ ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದರು.
    ಬ್ಲ್ಯಾಕ್ ಫಂಗಸ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಅಡಿ ನೀಡಲು ಹಾಗೂ ಹಣಕಾಸು ಸಂಸ್ಥೆಯಿಂದ ಗ್ರಾಮೀಣಕ್ಕೆ ನೀಡಿರುವ ಆರ್ಥಿಕ ನೆರವು ಬಿಡುಗಡೆ ಮಾಡಲು ಆಗ್ರಹಿಸಿದರು.
    ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಾರಿ ಕೇಸ್​ನಿಂದ ಸಾವಿಗೀಡಾದವರನ್ನು ಕೋವಿಡ್ ಮರಣವೆಂದು ನಮೂದಿಸುತ್ತಿಲ್ಲ. ಸಾರಿ ಕೇಸ್​ನಿಂದ ಮೃತಪಟ್ಟ ಮಕ್ಕಳಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂದು ಆಗ್ರಹಿಸಿದರು.
    ಶಾಸಕರ ಮನವಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ದರ ಕಡಿಮೆಗೊಳಿಸಬೇಕು. ಕಿಮ್ಸ್​ನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಪೈಕಿ ಶೇ. 65ರಷ್ಟು ಜನರಿಗೆ ಶಸ್ತ್ರ ಚಿಕಿತ್ಸೆ ಆಗಿದೆ. ಬೇರೆ ಜಿಲ್ಲೆಗಳಿಂದ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗುವ ವೈದ್ಯಕೀಯ ಪರಿಕರಗಳನ್ನು ಕಿಮ್ಸ್​ಗೆ ಒದಗಿಸುವಂತೆ ಶಾಸಕ ಪ್ರಸಾದ ಅಬ್ಬಯ್ಯ ಮನವಿ ಮಾಡಿದರು.
    ಕುಂದಗೋಳ ತಾಲೂಕಿನಲ್ಲಿ ವೈದ್ಯರ ಕೊರತೆ ನೀಗಿಸಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಮನವಿ ಮಾಡಿದರು.
    ಇದೇ ಸಂದರ್ಭದಲ್ಲಿ ಕೋವಿಡ್ ಕುರಿತ ಸಾಕ್ಷ್ಯತ್ರ ಪ್ರದರ್ಶಿಸಲಾಯಿತು. ಉಪಮುಖ್ಯಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಾರ್ತಾ ಸಚಿವ ಸಿ.ಸಿ. ಪಾಟೀಲ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಡಾ. ರವಿಕುಮಾರ ಸುರಪುರ, ಪೊಲೀಸ್ ಆಯುಕ್ತ ಲಾಭೂರಾಮ್ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇತರರಿದ್ದರು.
    ಸೋಂಕು ಶೇ. 11.9ಕ್ಕೆ ಇಳಿಕೆ: ಧಾರವಾಡ ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ದರ ಶೇ. 39.2ಕ್ಕೆ ಏರಿತ್ತು. ವ್ಯಾಪಕ ನಿಯಂತ್ರಣ ಕ್ರಮಗಳಿಂದ ಇದೀಗ ಶೇ. 11.9ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದೀಗ 4385 ಸಕ್ರಿಯ ಪ್ರಕರಣಗಳಿವೆ. 600 ಜನ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಹಾಗೂ 1500 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು. ಜಿಲ್ಲೆಯ 20 ಲಕ್ಷ ಜನರಲ್ಲಿ 9 ಲಕ್ಷ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 10 ದಿನಗಳಲ್ಲಿ ನಗರ ಪ್ರದೇಶದ ಶೇ. 41 ಹಾಗೂ ಗ್ರಾಮೀಣ ಪ್ರದೇಶದ ಶೇ. 58ರಷ್ಟು ಜನರನ್ನು ತಪಾಸಣೆ ಮಾಡಲಾಗಿದೆ. ಇದುವರೆಗೆ 3,31,717 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.
    ಅಗತ್ಯ ವೈದ್ಯಕೀಯ ಪರಿಕರ ಖರೀದಿಸಿ: ಬ್ಲ್ಯಾಕ್ ಫಂಗಸ್​ಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್​ನಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಶಸ್ತ್ರ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಪರಿಕರಗಳನ್ನು ತಕ್ಷಣವೇ ಖರೀದಿಸುವಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ ಹೇಳಿದರು. ಸಾರಿ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿ ಮರಣ ಹೊಂದಿದರೆ ಕೋವಿಡ್​ನಂತಹ ಮರಣ ಎಂದೇ ಪರಿಗಣಿಸಲಾಗುವುದು. ಸಾರಿ ಲಕ್ಷಣಗಳಿಂದ ತಂದೆ-ತಾಯಿ ಮೃತಪಟ್ಟರೆ ಮಕ್ಕಳಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ನೀಡಲಾಗುವುದು ಎಂದರು. ಅಂಪೋಟೆರಿಸನ್ ಬಿ ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಎಫ್​ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts