More

    ಕೋರ್ಟ್ ಸೂಚನೆ ಪಾಲಿಸದ ಜಿ.ಪಂ.

    ಕಾರವಾರ: ನ್ಯಾಯಾಲಯದ ಸೂಚನೆಯ ನಂತರವೂ ರಸ್ತೆ ದುರಸ್ತಿ ಮಾಡದ ಜಿಲ್ಲಾ ಪಂಚಾಯಿತಿ ಕ್ರಮವನ್ನು ಪ್ರಶ್ನಿಸಿ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

    ಗುಳ್ಳಾಪುರ-ಹಳವಳ್ಳಿ 23.7 ಕಿಮೀ ರಸ್ತೆ ಸಂಪೂರ್ಣ ಹಾಳಾಗಿ ಐದು ವರ್ಷ ಕಳೆದಿದೆ. ಕಳೆದ ಆಗಸ್ಟ್​ನಲ್ಲಿ ಸಂಭವಿಸಿದ ನೆರೆಯಿಂದ ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮೂಲತಃ ಕರ್ನಾಟಕ ವಿದ್ಯುತ್ ನಿಗಮದ ಪುನರ್ವಸತಿ ಕೇಂದ್ರ ಇಲ್ಲಿರುವುದರಿಂದ ಕೆಪಿಸಿ ರಸ್ತೆ ಅಭಿವೃದ್ಧಿ ಮಾಡಿತ್ತು. 2006ರಲ್ಲಿ ರಸ್ತೆಯನ್ನು ಜಿಪಂಗೆ ಹಸ್ತಾಂತರ ಮಾಡಲಾಗಿದೆ. ರಸ್ತೆಯಲ್ಲಿ ಸಂಚಾರ ಒಂದು ಸಾಹಸ ಎಂಬ ಪರಿಸ್ಥಿತಿ ತಲುಪಿದೆ. ಈ ರಸ್ತೆ ರಿಪೇರಿ ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ಜಿಪಂಗೆ ಮನವಿ ಸಲ್ಲಿಸಿದ್ದರು. 2017ರ ಡಿಸೆಂಬರ್​ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೂ ಯಾವುದೇ ಪ್ರಯೋಜನವಾಗದ ಕಾರಣ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಕ್ಷಣ ರಿಪೇರಿಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಆದರೂ ಹಣ ಬಿಡುಗಡೆ ಮಾಡದ ಕಾರಣ ಗ್ರಾಮಸ್ಥರು ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಆ ನಂತರ 70 ಲಕ್ಷ ರೂ. ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ 5 ಕಿ.ಮೀ. ಹೊಂಡ ತುಂಬಿ ತಾತ್ಕಾಲಿಕ ರಿಪೇರಿ ಕಾರ್ಯ ನಡೆಸಿದೆ. ಆದರೆ, ಇನ್ನು 18.7 ಕಿಮೀ ರಸ್ತೆ ರಿಪೇರಿ ಬಾಕಿ ಇದೆ ಎಂಬುದು ಗ್ರಾಮಸ್ಥರ ಆರೋಪ. ರಸ್ತೆಯನ್ನು ಮಾ. 15ರೊಳಗೆ ರಿಪೇರಿ ಮಾಡಬೇಕು. ಇಲ್ಲದಿದ್ದಲ್ಲಿ ಮಾ. 16ರಿಂದ ಜಿಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಲ್ಲೇಶ್ವರ ಗ್ರಾಮಸ್ಥ ಶಿವರಾಮ ಗಾಂವಕರ್ ಹಾಗೂ ಇತರರು ಜಿಪಂಗೆ ಸೋಮವಾರ ಪತ್ರ ನೀಡಿ ಎಚ್ಚರಿಸಿದ್ದಾರೆ.

    ಅಧಿಕಾರಿಗಳು ಹೇಳುವುದೇನು..?: ಗುಳ್ಳಾಪುರ-ಹಳವಳ್ಳಿ ರಸ್ತೆ ಸಂಬಂಧ ನ್ಯಾಯಾಲ ಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಫೆ. 18ಕ್ಕೆ ವಿಚಾರಣೆ ನಡೆದಿತ್ತು. ಫೆ. 28ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ. ತುರ್ತು ರಿಪೇರಿಗೆ ಹಣ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಹಣ ಬಿಡುಗಡೆ ಮಾಡಿ ರಿಪೇರಿ ಮಾಡಲಾಗಿದೆ. ಒಟ್ಟಾರೆ 23.7 ಕಿಮೀ ರಸ್ತೆಯಲ್ಲಿ 5 ಕಿಮೀ ಪಿಎಂಜಿಎಸ್​ವೈ ರಸ್ತೆಯನ್ನು 70 ಲಕ್ಷ ರೂ. ನಲ್ಲಿ ರಿಪೇರಿ ಮಾಡಲಾಗಿದೆ. ಇನ್ನುಳಿದ 18 ಕಿಮೀ ಜಿಪಂ ರಸ್ತೆ ಅಭಿವೃದ್ಧಿಗೆ 7.5 ಕೋಟಿ ರೂ. ಬೇಕು ಎಂದು ಯೋಜನೆ ರೂಪಿಸಲಾಗಿದೆ. ಅದನ್ನು ಬಿಡುಗಡೆ ಮಾಡುವ ಅಧಿಕಾರ ಸರ್ಕಾರದ ಹಂತದಲ್ಲಿದೆ ಎಂಬುದು ಜಿಪಂ ಸಿಇಒ ಎಂ. ರೋಶನ್ ಅವರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts