More

    ಕೋಟೆನಾಡಲ್ಲಿ ಮತ್ತೊಂದು ಮರ್ಯಾದಾ ಹತ್ಯೆ?

    ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳಿಬ್ಬರ ಬರ್ಬರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಅಪ್ರಾಪ್ತೆಯ ಹಾಗೂ ಯುವಕನ ಮೃತ ದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ.

    ಸಮೀಪದ ಹಿರೇಕೊಪ್ಪ ಗ್ರಾಮದಲ್ಲಿ ದಲಿತ ಯುವಕ ಮಂಜುನಾಥ ಮುದಿಯಪ್ಪ ಅಬ್ಬಿಗೇರಿ (21) ಹಾಗೂ ಅಪ್ರಾಪ್ತ ಯುವತಿ ಮೃತಪಟ್ಟವರು.

    ಕಳೆದ ಮೂರು ವರ್ಷಗಳ ಹಿಂದೆ ಅಪ್ರಾಪ್ತೆಯ ಪಾಲಕರು ಮಂಜುನಾಥ ಅಬ್ಬಿಗೇರಿ ಮೇಲೆ ಫೋಕ್ಸೋ ಕಾಯ್ದೆಯಡಿ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರನ್ವಯ ಅಪ್ರಾಪ್ತೆಯನ್ನು ಗದಗನ ಬಾಲಮಂದಿರಕ್ಕೆ ಹಾಗೂ ಯುವಕ ಮಂಜುನಾಥನನ್ನು ಜೈಲಿಗೆ ಕಳುಹಿಸಲಾಗಿತ್ತು. ಕಳೆದ ಐದಾರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದ ಮಂಜುನಾಥ ಹಿರೇಕೊಪ್ಪಕ್ಕೆ ಬಂದು ಟ್ರ್ಯಾಕ್ಟರ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ನಾಲ್ಕು ದಿನಗಳ ಹಿಂದೆ ಅಪ್ರಾಪ್ತೆ ಜಾತ್ರೆಗೆಂದು ಊರಿಗೆ ಬಂದಿದ್ದಳು. ಏಕಾಏಕಿ ಮಂಗಳವಾರ ಬೆಳಗ್ಗೆ ಊರ ಹೊರಗಿನ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ ಮತ್ತು ಅಪ್ರಾಪ್ತೆಯ ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಡಿವೈಎಸ್​ಪಿ, ಸಿಪಿಐ ಮತ್ತು ಪಿಎಸ್​ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಣು ಹಾಕಿಕೊಂಡ ಸ್ಥಿತಿ ನೋಡಿದರೆ ಅನುಮಾನ ಮೂಡುತ್ತದೆ ಎಂದು ಯುವಕನ ಪಾಲಕರು ಪತ್ರಿಕೆಗೆ ತಿಳಿಸಿದರು. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಇದು ಕೊಲೆಯೋ ಅಥವಾ ತಾವೇ ನೇಣಿಗೆ ಶರಣರಾಗಿದ್ದಾರೋ ಎಂಬುದು ಮಾತ್ರ ತನಿಖೆಯಿಂದ ತಿಳಿಯಬೇಕಿದೆ.

    ಬಿಇಒ ಹಳ್ಳಿಗುಡಿ ಅಮಾನತು

    ಮುಂಡರಗಿ: ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಹಳ್ಳಿಗುಡಿ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

    ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳೀಯ ಪೊಲೀಸ್ ಠಾಣೆಗೆ ಪಾಲಕರೊಂದಿಗೆ ಆಗಮಿಸಿ ದೂರು ನೀಡಿದ್ದಳು. ಪ್ರಕರಣದ ತನಿಖೆ ನಡೆಸಿದ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಅವರು ಬಿಇಒ ಎಸ್.ಎನ್. ಹಳ್ಳಿಗುಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶ ನೀಡಿದ್ದಾರೆ. ಬಿಇಒ ಎಸ್.ಎನ್. ಹಳ್ಳಿಗುಡಿ ಅವರು ಅಮಾನತುಗೊಂಡಿರುವುದನ್ನು ಡಿಡಿಪಿಐ ಎನ್.ಎಚ್. ನಾಗನೂರು ಅವರು ಖಚಿತಪಡಿಸಿದ್ದಾರೆ.

    ಶಾಲಾ ಮುಖ್ಯಾಧ್ಯಾಪಕ ಪರಬತ್ ಅಮಾನತು

    ಗದಗ: ಕರ್ತವ್ಯ ಲೋಪ ಆರೋಪದಡಿ ಶಿರಹಟ್ಟಿ ತಾಲೂಕಿನ ಗುಡ್ಡದಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್.ಎಚ್. ಪರಬತ್ ಅವರನ್ನು ಅಮಾನತುಗೊಳಿಸಲಾಗಿದೆ. ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ತಿಳಿಸಿದ್ದಾರೆ.

    ಈಜಲು ಹೋಗಿದ್ದ ಯುವಕ ನೀರು ಪಾಲು

    ಶಿರಹಟ್ಟಿ: ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿ ಮೃತಪಟ್ಟ ಘಟನೆ ತಾಲೂಕಿನ ಮಜ್ಜೂರ ತಾಂಡಾದಲ್ಲಿ ಸೋಮವಾರ ನಡೆದಿದೆ. ಗೋಪಿ ಲೋಕಪ್ಪ ಲಮಾಣಿ (24) ಮೃತಪಟ್ಟವ. ಮಧ್ಯಾಹ್ನ ಈಜಲೆಂದು ಕೆರೆಗೆ ಹಾರಿದ್ದಾನೆ. ಆತನ ಸುಳಿವು ಕಾಣದೇ ಗಾಬರಿಗೊಂಡ ಜೊತೆಗಿದ್ದವರು ಆತನ ಕುಟುಂಬದವರಿಗೆ ತಿಳಿಸಿದ್ದಾರೆ. ಕುಟುಂಬದವರು ಕೆರೆಗೆ ಹೋಗಿ ನೋಡಿದಾಗ ಆತ ನೀರು ಪಾಲಾಗಿದ್ದಾನೆಂದು ಪೊಲೀಸರಿಗೆ ತಿಳಿಸಿದ್ದಾರೆ. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್​ಐ ಸುನೀಲಕುಮಾರ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಶೋಧ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ.

    ಮಂಗಳವಾರ ಮೀನುಗಾರರಿಂದ ಶೋಧ ಕಾರ್ಯ ನಡೆಸಿ ಮೃತ ದೇಹ ಪತ್ತೆ ಮಾಡಿದ್ದಾರೆ. ಈ ಕುರಿತು ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts