More

    ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ

    ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಬೆಸಗರಹಳ್ಳಿ ವೃತ್ತ ಘಟಕ ಮತ್ತು ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಬುಧವಾರ ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ರೈತ ಸಂಘದ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ಕೊಡದಿರುವುದು ಖಂಡನೀಯ. ಕಬ್ಬು ಸರಬರಾಜು ಮಾಡಿದ 14 ದಿನದ ಒಳಗಡೆ ಕಬ್ಬು ಕಟಾವು ಹಣ ನೀಡಬೇಕು. ಆದರೆ ಈ ಬೇಡಿಕೆ ಹಲವು ದಿನಗಳಿಂದ ಈಡೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಬ್ಬು ಕಟಾವು ದರವನ್ನು ಆರಂಭದಲ್ಲಿ 400 ರೂ. ನಿಗದಿಪಡಿಸಿ ನಂತರ ಪ್ರತಿ ತಿಂಗಳು ಮನಬಂದಂತೆ ಹೆಚ್ಚಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಕ್ಕರೆ ಕಾಯ್ದೆಯ ಪ್ರಕಾರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಕಬ್ಬಿನ ದರ ಮಾರ್ಪಾಡು ಮಾಡಿ ಪ್ರೋತ್ಸಾಹ ಧನ ನೀಡಬೇಕು. ಆದರೆ ಆ ಕಾರ್ಯ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕಾರ್ಖಾನೆಯ ಅಧಿಕಾರಿಗಳು ಮತ್ತು ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕಾರ್ಖಾನೆಯ ಅಧಿಕಾರಿಗಳು ರೈತರನ್ನು ಸಮಾಧಾನಪಡಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಅಧಿಕಾರಿಗಳಿಗೆ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸೀತಾರಾಮು, ಅಣ್ಣೂರು ಮಹೇಂದ್ರ, ಪ್ರಭುಲಿಂಗ, ಉಮೇಶ, ರಮೇಶ, ಕೃಷ್ಣ, ಚನ್ನಪ್ಪ, ಶಿವರಾಮ, ವೆಂಕಟೇಶ, ರಾಮಕೃಷ್ಣ, ಲೋಕೇಶ, ಜಯರಾಮ ಹೆಗಡೆ, ಪುಟ್ಟಸ್ವಾಮಿ, ಶಿವಣ್ಣ, ಶಿವಲಿಂಗಯ್ಯ, ರಮೇಶ, ಲಕ್ಷ್ಮಣ, ಕಾಂತರಾಜು, ವಿವೇಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts