More

    ಕೊಡವ ಮುಸ್ಲಿಂ ಕುವಲೆರ ಕ್ರಿಕೆಟ್ ಹಬ್ಬ ಸಮಾರೋಪ

    ವಿರಾಜಪೇಟೆ: ಕೊಡವ ಮುಸ್ಲಿಂ ಕ್ರಿಕೆಟ್ ಹಬ್ಬ ನಡೆದು ಇದೇ ಮೊದಲ ಬಾರಿಗೆ ಕೊಡವ ಮುಸ್ಲಿಂ ಕ್ರಿಕೆಟ್ ಹಬ್ಬದಲ್ಲಿ ದಾಖಲೆ 64 ತಂಡಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಚಾಮಿಯಾಲದ ಕುವೆಲೆರ ಕುಟುಂಬದವರು ಕೊಡವ ಮುಸ್ಲಿಂ ಕೌಟುಂಬಿಕ ಕ್ರಿಕೆಟ್ ಹಬ್ಬವನ್ನು ಇದೇ ಮೊದಲ ಬಾರಿಗೆ ವಿರಾಜಪೇಟೆಯ ಚಾಮಿಯಾಲದಲ್ಲಿ ಆಯೋಜಿಸಿದ್ದರು. ಕಳೆದ ಆರು ದಿವಸಗಳಿಂದ ಜಿಲ್ಲೆಯ 64 ಕೊಡವ ಮುಸ್ಲಿಂ ಕುಟುಂಬಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡು ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಕಿಕ್ಕೇರಿ ಬಿಅಂಬಟ್ಟಿ ಮತ್ತು ಕುರುಳಿಕಾರಡ ಎಮ್ಮೆಮಾಡು ತಂಡಗಳು ಸೆಣಸಾಟ ನಡೆಸಿ ಕಿಕ್ಕೇರಿ ಬಿ ಅಂಬಟ್ಟಿ ತಂಡ ಫೈನಲ್ ಪ್ರವೇಶ ಮಾಡಿತು.

    ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ಕತ್ತಣಿರ ಮತ್ತು ಪೊಟ್ಟಂಡ ತಂಡಗಳ ನಡುವೆ ನಡೆದು ಈ ಪಂದ್ಯದಲ್ಲಿ ಕತ್ತಣಿರ ತಂಡ ಫೈನಲ್ ಪ್ರವೇಶ ಪಡೆಯಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೊಟ್ಟಂಡ ಮತ್ತು ಕುರುಳಿಕಾರಂಡ ಪಂದ್ಯಾಟದಲ್ಲಿ ಕುರುಳಿಕಾರಂಡ ಜಯ ಗಳಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
    ಫೈನಲ್ ಪಂದ್ಯಾಟ ಕತ್ತಣಿರ ಹಾಗೂ ಕಿಕ್ಕೇರಿ.ಬಿ ಅಂಬಟ್ಟಿ ತಂಡಗಳ ನಡುವೆ ನಡೆಯಿತು. ಫೈನಲ್ ಪಂದ್ಯದಲ್ಲಿ ಕತ್ತಣಿರ ತಂಡ 6 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ ಸಾಧಾರಣ ಮೊತ್ತ 31 ರನ್ ಕಲೆ ಹಾಕಿತ್ತು. ತದನಂತರ ಬ್ಯಾಟ್ ಮಾಡಿದ ಕಿಕ್ಕೇರಿ ಬಿ ಅಂಬಟ್ಟಿ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 34 ರನ್‌ಗಳನ್ನು ಕಲೆ ಹಾಕುವ ಮೂಲಕ ಇದೇ ಮೊದಲ ಬಾರಿಗೆ ನಡೆದ ಕುವಲೆರ ಕ್ರಿಕೆಟ್ ಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಕಳೆದ ಏಳು ದಿವಸಗಳಿಂದ ನಡೆಯುತ್ತಿದ್ದ ಕುವಲೆರ ಕೌಟುಂಬಿಕ ಕ್ರಿಕೆಟ್ ಹಬ್ಬಕ್ಕೆ ತೆರೆ ಬಿದ್ದಿತ್ತು.

    ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅರಮೇರಿ ಕಳಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೊಡಗಿನಲ್ಲಿ ಪ್ರಸ್ತುತ ಕ್ರೀಡೆಗಳು ಹೆಚ್ಚು ನಡೆಯುತ್ತಿದ್ದು, ಇಲ್ಲಿ ಕ್ರೀಡೆ ಪ್ರಧಾನವಾಗಿದೆ. ಯುವ ಸಮೂಹ ಅತಿ ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕ್ರೀಡೆಯಿಂದ ಶಿಸ್ತು, ಉತ್ತಮ ಆರೋಗ್ಯ ಬೆಳವಣಿಗೆ ಆಗುತ್ತದೆ. ಕೌಟುಂಬಿಕ ಪಂದ್ಯಾಟಗಳಿಂದ ಯುವಕರಿಗೆ ಹೆಚ್ಚು ಅವಕಾಶಗಳು ಒದಗುತ್ತವೆ ಎಂದರು.

    ಬಹುಮಾನ: ವಿಜೇತ ಮೊದಲ ತಂಡಕ್ಕೆ ಬಹುಮಾನವಾಗಿ 1 ಲಕ್ಷ ರೂ. ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕಿಕ್ಕೇರಿ ಬಿ ಅಂಬಟ್ಟಿ ತಂಡದ ಅಫ್ರಾಜ್ ಪಡೆದುಕೊಂಡರು.

    ಈ ಸಂದರ್ಭದಲ್ಲಿ ಇದೇ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕುಂಜಿಲದ ಸಹಲ್(17) ಎನ್ನುವ ಬಾಲಕ ಮರದಿಂದ ತೀವ್ರ ಅಪಘಾತಗೊಂಡಿದ್ದು ಅವರಿಗೆ ತುರ್ತಾಗಿ ಹೆಚ್ಚಿನ ಚಿಕಿತ್ಸೆಗೆ 10 ಲಕ್ಷಕ್ಕೂ ಹೆಚ್ಚು ಹಣದ ಅವಶ್ಯಕತೆ ಇರುವುದರಿಂದ ಇದೇ ಫೈನಲ್ ಪಂದ್ಯದಲ್ಲಿ ದಾನಿಗಳ ನೆರವನ್ನು ಕುವೆಲೆರ ಕುಟುಂಬದವರು ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಕ್ರೀಡಾ ಅಭಿಮಾನಿಗಳು ಹಾಗೂ ಫೈನಲ್‌ನಲ್ಲಿ ಪ್ರಶಸ್ತಿ ಪಡೆದ ಎರಡೂ ತಂಡಗಳು ಸೇರಿ ಸುಮಾರು 50 ಸಾವಿರ ರೂ. ಸಂಗ್ರಹಿಸಿ, ಇದರಲ್ಲಿ ಪ್ರಶಸ್ತಿ ಪಡೆದ ತಂಡ 20 ಸಾವಿರ ರೂ. ಮತ್ತು ಎರಡನೇ ತಂಡ 10 ಸಾವಿರ ರೂ.ಗಳನ್ನು ಸಹಲ್ ಕುಟುಂಬಕ್ಕೆ ಹಸ್ತಾಂತರಿಸಿತು.

    ಕುವಲೆರ ಕ್ರಿಕೆಟ್ ಕಪ್ ಸ್ಥಾಪಕ ಅಧ್ಯಕ್ಷ ಕುವಲೇರ ಅನಿಸ್, ಉಪಾಧ್ಯಕ್ಷರಾದ ಆಲಿರ ಪವಿಲ್, ಪ್ರಧಾನ ಕಾರ್ಯದರ್ಶಿ ಕುವಲೆರ ಆಸ್ಪಕ್, ಗೌರವ ಕಾರ್ಯದರ್ಶಿ ಪುದಿಯತಂಡ ಮುನೀರ್ ಮತ್ತು ಪ್ರಧಾನ ಸಲಹೆಗಾರರಾದ ಕುವಲೆರ ಹರ್ಷದ್ ಮತ್ತು ಅಲಿರ ಸಜಲ್ ಪುದಿಯತಂಡ ರಿಯಾಜ್ ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts