More

    ಕೊಚ್ಚಿ ಹೋದ ಫಸಲು

    ಶಿಗ್ಗಾಂವಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಾದ್ಯಂತ ನೂರಾರು ಎಕರೆ ಬೆಳೆ ಹಾನಿಯಾಗಿದೆ.

    ಮಂಗಳವಾರ ಮತ್ತು ಬುಧವಾರ ಸುರಿದ ಮಳೆಯಿಂದ ದುಂಡಸಿ, ಶಿಗ್ಗಾಂವಿ, ಬಂಕಾಪುರ ಹೋಬಳಿ ಭಾಗದಲ್ಲಿನ ಬಹುತೇಕ ಕೆರೆಗಳು ಕೋಡಿ ಬಿದ್ದು, ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ಹಾನಿಗೊಂಡಿವೆ.

    ತಾಲೂಕಿನ ದುಂಡಸಿ, ಬಂಕಾಪುರ, ನಾರಾಯಣಪುರ, ಮುನವಳ್ಳಿ, ಸದಾಶಿವಪೇಟ, ಬಿಸನಳ್ಳಿ, ಚಿಕ್ಕಮಲ್ಲೂರ, ಮುಗಳಿ, ಬಸರಿಕಟ್ಟಿ ಗ್ರಾಮಗಳಲ್ಲಿ ನೂರಾರು ಎಕರೆ ಭೂಮಿ ಜಲಾವೃತವಾಗಿದೆ. ಹತ್ತಿ, ಶೇಂಗಾ, ಗೋವಿನಜೋಳ, ಸೋಯಾಬೀನ್ ಸಂಪೂರ್ಣ ನೀರಿನಲ್ಲಿ ಮುಳುಗಿವೆ.

    ತಾಲೂಕಿನ ಹಿರೇಮಲ್ಲೂರ ಗ್ರಾಮದ ಮಲ್ಲನಗೌಡ ಪಾಟೀಲ ಅವರ 3 ಎಕರೆ ಜಮೀನಿನಲ್ಲಿದ್ದ ಶೇಂಗಾ, ಬಳಲುಕೊಪ್ಪ ಗ್ರಾಮದ ಪ್ರಶಾಂತ ಕಜ್ಜಿಯವರ ಹೊಲದಲ್ಲಿದ್ದ ಶೇಂಗಾ ಬೆಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ. ಹತ್ತಿ ಹೊಲದಲ್ಲಿ ನೀರು ತುಂಬಿದ್ದು, ಬೆಳೆ ಹಾನಿ ಸಂಭವಿಸುವ ಆತಂಕ ಮೂಡಿದೆ.

    ಬಂಕಾಪುರ ಹೋಬಳಿ ಭಾಗದಲ್ಲಿ ಕಿತ್ತು ಹಾಕಿದ್ದ ಶೇಂಗಾ ಬೆಳೆ ಮಳೆಯಿಂದ ಕಟಾವು ಮಾಡಲು ಆಗದೆ ಹೊಲದಲ್ಲಿಯೇ ಮೊಳಕೆ ಒಡೆಯುತ್ತಿವೆ.

    ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶಿಗ್ಗಾಂವಿ ಹೋಬಳಿ ವಾಡಿಕೆ 714ಕ್ಕಿಂತ 691 ಮಿಮೀ, ಬಂಕಾಪುರ ಹೋಬಳಿ 704ಕ್ಕಿಂತ 855, ದುಂಡಸಿ ಹೋಬಳಿ 853ಕ್ಕಿಂತ 968 ಮಿಮೀನಷ್ಟು ಮಳೆ ಆಗಿದೆ. ಆಗಸ್ಟ್ ತಿಂಗಳಲ್ಲಿ 2020 ಹೆಕ್ಟೇರ್, ಸೆಪ್ಟೆಂಬರ್, ಅಕ್ಟೋಬರ್​ನಲ್ಲಿ 6361 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಇಂದಿನವರೆಗಿನ ಬೆಳೆ ಹಾನಿಯ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಬಾಬುರಾವ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts