More

    ಕೊಂಕಣ ರೈಲು ಮಾರ್ಗ ವಿದ್ಯುದ್ದೀಕರಣ

    ಕಾರವಾರ: ಕೊಂಕಣ ರೈಲು ಮಾರ್ಗದಲ್ಲಿ ಸಂಪೂರ್ಣ ವಿದ್ಯುತ್ ರೈಲುಗಳು ಓಡುವ ದಿನಗಳು ದೂರವಿಲ್ಲ. ರೈಲು ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಶೇ.100 ರಷ್ಟು ಚುರುಕಿನಿಂದ ಸಾಗಿದೆ ಎಂದು ರೈಲ್ವೆ ಸಚಿವ ಪೀಯೂಶ್ ಗೋಯಲ್ ತಿಳಿಸಿದ್ದಾರೆ. ಕೊಂಕಣ ರೈಲ್ವೆ ನಿಗಮ ಸಿದ್ಧಪಡಿಸಿದ ವಿಡಿಯೋವೊಂದನ್ನು ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ.

    ಮಹಾರಾಷ್ಟ್ರದ ರೋಹಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ತೋಕೂರುವರೆಗೆ ಒಟ್ಟು 736 ಕಿಮೀ ರೈಲ್ವೆ ಮಾರ್ಗದಲ್ಲಿ ಇದುವರೆಗೆ ವೀರ್​ನಿಂದ ರತ್ನಾಗಿರಿ ಹಾಗೂ ಕುಮಟಾದಿಂದ ತೋಕೂರುವರೆಗೆ 340 ಕಿಮೀ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಮುಕ್ತಾಯವಾಗಿದೆ. ರೋಹಾದಿಂದ -ವೀರ್ ಹಾಗೂ ರತ್ನಾಗಿರಿಯಿಂದ ಕುಮಟಾದವರೆಗೆ ವಿದ್ಯುದ್ದೀಕರಣ ಕಾಮಗಾರಿ ಬರದಿಂದ ಸಾಗಿದೆ.

    ಇಲೆಕ್ಟ್ರಿಕ್ ವೈರ್ ಅಳವಡಿಸುವ ಸ್ವಯಂ ಚಾಲಿತ ರೈಲಿನ ಮೂಲಕ ಈ ಕಾಮಗಾರಿ ನಡೆದಿದೆ. ಒಮ್ಮೆ ಕಾಮಗಾರಿ ಮುಕ್ತಾಯವಾದ ನಂತರ ವಿದ್ಯುತ್ ಗ್ರಿಡ್ ಜತೆ ಸಂಪರ್ಕ ಕಲ್ಪಿಸಲಾಗುವುದು. ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳ ಓಡಾಟ ಪ್ರಾರಂಭವಾದ ನಂತರ ಮಾಲಿನ್ಯ ಇನ್ನಷ್ಟು ಕಡಿಮೆಯಾಗಲಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.

    ಏನಿದು ಯೋಜನೆ?: ಒಟ್ಟು 1,100 ಕೋಟಿ ರೂ.ಗಳ ವಿದ್ಯುದ್ದೀಕರಣ ಹಾಗೂ ದ್ವಿಪಥ ಕಾಮಗಾರಿ 2017 ರಿಂದ ಪ್ರಗತಿಯಲ್ಲಿದೆ. ಲಾಕ್​ಡೌನ್ ಹಾಗೂ ಕರೊನಾ ಕಾರಣದಿಂದ ರೈಲುಗಳ ಓಡಾಟ ಕಡಿಮೆಯಾಗಿದ್ದು, ಕಾಮಗಾರಿಗೆ ಇನ್ನಷ್ಟು ಅನುಕೂಲವಾಗಿದೆ. 2021 ರ ಮಾರ್ಚ್ ಹೊತ್ತಿಗೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ವಿದ್ಯುತ್ ರೈಲು ಓಡಾಡಲಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಕೊಂಕಣ ರೈಲ್ವೆಯಲ್ಲಿ ಸದ್ಯ ವರ್ಷಕ್ಕೆ 300 ಕೋಟಿ ರೂ.ಗಳಷ್ಟು ಇಂಧನಕ್ಕಾಗಿ ಖರ್ಚು ಮಾಡಲಾಗುತ್ತಿದೆ. ವಿದ್ಯುತ್ ರೈಲು ಓಡಾಟ ಪ್ರಾರಂಭಿಸಿದ ನಂತರ ಅದು 100 ಕೋಟಿ ರೂ.ಗೆ ಇಳಿಯಲಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts