More

    ಕೈ ನಾಯಕರಿಗೆ ಪ್ರಭಂಜನ್ ಪ್ರಶ್ನೆ

    ಚಿತ್ರದುರ್ಗ: ಬಜರಂಗದಳ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿ, ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ಸಿಗರನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಪ್ರಮುಖ ಅಜೆಂಡಾ ಎಂದು ಬಜರಂಗದಳದ ರಾಜ್ಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ವಿರೋಧಿ ಸಂಘಟನೆಯಾದ ಪಿಎಫ್‌ಐಯನ್ನು ಕೇಂದ್ರ ಸರ್ಕಾರ ನಿಷೇಧಿಸಿದಾಗ ಕಾಂಗ್ರೆಸ್ಸಿಗರು ತುಟಿ ಬಿಚ್ಚಲಿಲ್ಲ. ಆದರೆ, ಹಿಂದುತ್ವದ ಉಳಿವಿಗಾಗಿ ಪ್ರಾಣಾರ್ಪಣೆಗೂ ಸದಾ ಸಿದ್ಧವಿರುವ ಬಜರಂಗದಳ ನಿಷೇಧಿಸುವ ಹುನ್ನಾರಕ್ಕೆ ಕೈ ಹಾಕಿದೆ. ಹೀಗಾಗಿ ಇಂದಿನಿಂದಲೇ ಬಿಜೆಪಿ ಪರ ಮನೆ-ಮನೆ ಅಭಿಯಾನ ನಡೆಸಿ ಹಿಂದುಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದರು.

    ಲವ್ ಜಿಹಾದಿಯಂತಹ ಕೃತ್ಯದೊಳಗೆ ಸಿಲುಕಿ ನರಳುವ ಹಿಂದು ಸಹೋದರಿಯರ ಮಾನ, ಪ್ರಾಣ ರಕ್ಷಣೆ ಮಾಡುವ ಮೂಲಕ ಕಣ್ಣೀರು ಒರೆಸಿದ ಸಂಘಟನೆ ನಮ್ಮದು. ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿ ಅದರ ರಕ್ಷಣೆಗೆ ಕಂಕಣತೊಟ್ಟು ನಿಂತಿದ್ದೇವೆ. ಹೀಗಿರುವಾಗ ಒಂದು ಸಮುದಾಯದ ತುಷ್ಟೀಕರಣಕ್ಕೆ ಮುಂದಾಗಿರುವ ಕಾಂಗ್ರೆಸ್‌ಗೆ ಮತದಾನದ ಮೂಲಕವೇ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು.

    ಸಾವು-ನೋವಿನ ಭಯಭೀತ ವಾತಾವರಣವಿದ್ದ ಕೋವಿಡ್ ವೇಳೆ ಸಾವಿರಾರು ಮಂದಿ ಶವಗಳನ್ನು ಜೀವದ ಹಂಗು ತೊರೆದು ಅಂತ್ಯಸಂಸ್ಕಾರ ಮಾಡಿದ್ದೇವೆ. ಲಕ್ಷಾಂತರ ಮನೆಗಳಿಗೆ ಆಹಾರ, ಮತ್ತಿತರ ಕಿಟ್‌ಗಳನ್ನು ನೀಡಿ, ಧೈರ್ಯ ತುಂಬಿದ್ದೇವೆ. ಸಮಾಜಮುಖಿಯಾಗಿರುವ ನಮ್ಮ ಸಂಘಟನೆ ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಒಂದಾದರೂ ಸಾಕ್ಷಿ ಇದೆಯೇ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಹಿಂದುಗಳ ಆರಾಧ್ಯ ದೈವ ಗೋಮಾತೆಯನ್ನು ಇಡೀ ದೇಶದಲ್ಲಿ ರಕ್ಷಣೆ ಮಾಡಿದ್ದು ಬಜರಂಗದಳ. ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸಲು, ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ರಾಜ್ಯದ ಪ್ರತಿ ಹಿಂದು ಬಿಜೆಪಿ ಬೆಂಬಲಿಸುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

    ದೇಶದೊಳಗೆ ಒಂದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣವೇ ಹೊರತು ಮತ್ತಿನ್ಯಾರೂ ಅಲ್ಲ. ಮೊದಲಿನಿಂದಲೂ ಹಿಂದು ವಿರೋಧಿ ಧೋರಣೆ ಹೊಂದಿರುವ ಈ ಪಕ್ಷ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಉಳಿದಿದ್ದು, ತನ್ನ ಅಸ್ತಿತ್ವ ತಾನೇ ಹಾಳು ಮಾಡಿಕೊಳ್ಳುತ್ತಿದೆ. ರಾಷ್ಟ್ರಕ್ಕಾಗಿ ಸೈನ್ಯಕ್ಕೆ ಸೇರಲು ಸಿದ್ಧರಿದ್ದೇವೆ ಹೊರತು ಷಡ್ಯಂತ್ರಿಗಳನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.
    ವಿಎಚ್‌ಪಿ, ಬಜರಂಗದಳದ ಮುಖಂಡರಾದ ರುದ್ರೇಶ್, ಸಂದೀಪ್, ಕೇಶವ್, ರಂಗಸ್ವಾಮಿ ಇತರರಿದ್ದರು.


    ಗಣೇಶೋತ್ಸವದ ಮೂಲಕ ಸಂಘಟನೆ
    ಹಿಂದುಗಳನ್ನು ಒಗ್ಗೂಡಿಸಲು ಗಣೇಶೋತ್ಸವ ಪ್ರಮುಖ ಮಾರ್ಗ. ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ಪ್ರತಿಷ್ಠಾಪಿಸಲು ಕೂಡ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೊಂದರೆ ನೀಡಿತು. ಯಾವುದಕ್ಕೂ ಮಣಿಯದೆ ಪ್ರತಿ ವರ್ಷ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಹಿಂದುಗಳು ಜಾತಿ- ಭೇದ ಮರೆತು ಸೇರುವಂತೆ ಸಂಘಟಿಸಿ ರಾಜ್ಯದಲ್ಲೇ ಮಾದರಿಯಾಗಿದ್ದೇವೆ. ಯಾವ ಸರ್ಕಾರ ಬೇಕೆಂದು ಮತದಾರರೇ ನಿರ್ಧರಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts