More

    ‘ಕೈ’ ಜಾರಿದ ಸಾಗರ ಎಪಿಎಂಸಿ

    ಸಾಗರ: ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಚೇತನರಾಜ್ ಕಣ್ಣೂರು ಮತ್ತು ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಲತಾ ಹನುಮಂತಪ್ಪ ಆಯ್ಕೆಯಾಗಿದ್ದಾರೆ.

    ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಚ್.ಎಂ.ರವಿಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವಾಸಂತಿ ಶಿವಾನಂದಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಬಿಜೆಪಿ ಬೆಂಬಲಿತರಾಗಿ ಚೇತನರಾಜ್ ಕಣ್ಣೂರ್ಕು, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರೆ ಲತಾ ಹನುಮಂತಪ್ಪ ಕಣಕ್ಕೆ ಇಳಿದಿದ್ದರು.

    ಚುನಾವಣೆಯಲ್ಲಿ ಚೇತನರಾಜ್ ಕಣ್ಣೂರು 9 ಮತ ಹಾಗೂ ರವಿಕುಮಾರ್ 7 ಮತ ಪಡೆದಿದ್ದು ಒಂದು ಮತ ಅಸಿಂಧುವಾಗಿದೆ. ಒಬ್ಬ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರಿಗೂ ಮತ ಚಲಾಯಿಸಿದ್ದರಿಂದ ಒಂದು ಮತ ಅಸಿಂಧುವಾಗಿದೆ.

    ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಪಕ್ಷೇತರ ಸದಸ್ಯೆ ಲತಾ ಹನುಮಂತಪ್ಪ 10 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಾಸಂತಿ ಶಿವಾನಂದಪ್ಪ 7 ಮತ ಪಡೆದು ಸೋಲು ಅನುಭವಿಸಿದರು.

    ಬಳಿಕ ಮಾತನಾಡಿದ ಚೇತನರಾಜ್ ಕಣ್ಣೂರು, ಎಪಿಎಂಸಿ ಅಭಿವೃದ್ಧಿಗೆ ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಸಮಿತಿಯನ್ನು ರೈತಸ್ನೇಹಿಯಾಗಿಸುವ ಜತೆಗೆ ಎಪಿಎಂಸಿ ಕಾಯ್ದೆ ಅಧ್ಯಯನ ನಡೆಸಿ ತಿದ್ದುಪಡಿಯಿಂದ ಸಮಿತಿಯ ಚುನಾಯಿತ ಮಂಡಳಿಯ ಅಧಿಕಾರ ಮೊಟಕುಗೊಳ್ಳುವಂತಾದರೆ ತಿದ್ದುಪಡಿಯನ್ನು ಕೈಬಿಡುವಂತೆ ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರಿಗೆ ಮನವೊಲಿಸಲಾಗುತ್ತದೆ ಎಂದು ತಿಳಿಸಿದರು.

    ಸಮಿತಿಯ ನೂತನ ಉಪಾಧ್ಯಕ್ಷೆ ಲತಾ ಹನುಮಂತಪ್ಪ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಉಪಾಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಾಯಿತು. ಎಲ್ಲರ ವಿಶ್ವಾಸವನ್ನು ಪಡೆದು ಅಧ್ಯಕ್ಷರು ಮತ್ತು ನಾನು ಉತ್ತಮ ಅಡಳಿತ ನೀಡುತ್ತೇವೆ ಎಂದು ತಿಳಿಸಿದರು.

    ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಕಾರ್ಯನಿರ್ವಹಿಸಿದರು. ಸಮಿತಿ ಕಾರ್ಯದರ್ಶಿ ವಿಜಯಲಕ್ಷ್ಮೀ ಇದ್ದರು.

    ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ: ಎಪಿಎಂಸಿಯನ್ನು ರೈತರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾಡಬೇಕು. ಚುನಾವಣೆ ನಂತರ ಪಕ್ಷಬೇಧ ಮರೆತು ಅಭಿವೃದ್ಧಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಸಲಹೆ ನೀಡಿದರು.

    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಚೇತನರಾಜ್ ಕಣ್ಣೂರು ಮತ್ತು ಲತಾ ಹನುಮಂತಪ್ಪ ಅವರನ್ನು ಸನ್ಮಾನಿಸಿ ಮಾತನಾಡಿ, ಅಕಾರ ಸಿಕ್ಕಾಗ ತಾಳ್ಮೆ ಮತ್ತು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸ್ವಭಾವ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಂದೆ ಸರದಿಯಾಗಿ ಚುನಾವಣೆ ಎದುರಾಗುತ್ತದೆ. ಮೊದಲು ಗ್ರಾಮ ಪಂಚಾಯಿತಿ ಚುನಾವಣೆ ಬರಲಿದೆ. ಕಾರ್ಯಕರ್ತರಿಗೆ ಅಕಾರ ಕೊಡಿಸಲು ಗ್ರಾಪಂ ಚುನಾವಣೆ ಹೆಚ್ಚು ಸೂಕ್ತವಾಗಿದೆ. ಇದರ ಜತೆಗೆ ತಾಪಂ ಮತ್ತು ಜಿಪಂ ಚುನಾವಣೆಗೆ ಸಹ ಸಜ್ಜುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರ ಸ್ಥಾನದಲ್ಲಿರುವವರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ವಿ.ಮಹೇಶ್, ಕೆ.ಸತೀಶ್, ರೇವಪ್ಪ ಹೊಸಕೊಪ್ಪ, ಶಾಂತಕುಮಾರ್, ಬಿ.ಟಿ.ರವೀಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts