More

    ಕೈಗೆ ಶ್ರೀನಿವಾಸಗೌಡರ ಅವಶ್ಯಕತೆ ಇಲ್ಲ

    ಕೋಲಾರ:  ಜೆಡಿಎಸ್‌ನಿಂದ ಶಾಸಕರಾಗಿರುವ ಕೆ.ಶ್ರೀನಿವಾಸಗೌಡ ಅವರನ್ನು ಕಾಂಗ್ರೆಸ್‌ಗೆ ಬನ್ನಿ ಎಂದು ಯಾರೂ ಆಹ್ವಾನ ಮಾಡಿಲ್ಲ. ಅವರ ಅವಶ್ಯಕತೆಯೂ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್ ಹೇಳಿದರು.

    ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀನಿವಾಸಗೌಡರ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಗೊಂದಲದಲ್ಲಿದ್ದಾರೆ. ಅನುಕೂಲ ಸಿಂಧು ರಾಜಕಾರಣ ಶೋಭೆ ತರುವುದಿಲ್ಲ. ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಬಂದರೆ ಪಕ್ಷದ ಒಗ್ಗಟ್ಟು ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಶಾಸಕರಿಲ್ಲದ ಕೋಲಾರ, ಮುಳಬಾಗಿಲು ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡಿರುವ ಕೆ.ಎಚ್.ಮುನಿಯಪ್ಪ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. 7 ಬಾರಿ ಸಂಸದರಾಗಿರುವ ಕೆಎಚ್‌ಎಂ ಅವರ ತೇಜೋವಧೆಗೆ ಶಾಸಕರು ಮುಂದಾಗಿರುವುದು ಖಂಡನೀಯ ಎಂದರು.

    ಜಿಲ್ಲಾ ಕಾಂಗ್ರೆಸ್ ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ 2 ಬಾರಿ ಸೋತಿದ್ದ ಶ್ರೀನಿವಾಸಗೌಡ ಸಭ್ಯ ರಾಜಕಾರಣಿಯೆಂದು 2018ರಲ್ಲಿ ಮತದಾರರು ಜೆಡಿಎಸ್‌ನಿಂದ ಆಯ್ಕೆ ಮಾಡಿದ್ದರು. ಈಗ ಕಾಂಗ್ರೆಸ್ ಸೇರುವುದಾಗಿ ಸ್ವಯಂ ಘೋಷಣೆ ಮಾಡಿಕೊಂಡು ಗೊಂದಲ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು.

    2004ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾದ ಶ್ರೀನಿವಾಸಗೌಡ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಾ ಪಕ್ಷದ ಸಿದ್ಧಾಂತಕ್ಕೆ ಒಗ್ಗದೆ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡವರು ಮತ್ತೆ ಪಕ್ಷಕ್ಕೆ ಬರುವ ಅನಿವಾರ್ಯತೆ ಇಲ್ಲ ಎಂದರು.

    ಲೋಕಸಭೆ ಚುನಾವಣೆಯಲ್ಲಿ ಕೆಎಚ್‌ಎಂ ವಿರುದ್ಧ ಪ್ರಚಾರ ಮಾಡಿ ಪಂಚೆ ಮೇಲೆ ಕಟ್ಟಿ ಬಿಜೆಪಿ ಸಂಸದ ಮುನಿಸ್ವಾಮಿ ವಿಜಯೋತ್ಸವ ಆಚರಿಸಿದ್ದಕ್ಕೆ, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಹೊಂದಾಣಿಕೆಗೆ ಒಪ್ಪಿಕೊಳ್ಳದೆ ಕಾಲ ಮಿಂಚಿಹೋಗಿದೆ ಎಂದು ನಿರಾಕರಿಸಿದ್ದಕ್ಕೆ, ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಪಡೆಯಲು ಸಾಧ್ಯವಾಗದೆ ಕೆಎಚ್‌ಎಂಗಿಂತ ಮುನಿಸ್ವಾಮಿ ಡೇಂಜರ್ ಎಂದಿದ್ದಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

    ಕೆಸಿ ವ್ಯಾಲಿ ಯೋಜನೆಗೆ ರೂಪುರೇಷೆ ನೀಡಿದ್ದು ಕೆ.ಎಚ್.ಮುನಿಯಪ್ಪ. ರಮೇಶ್‌ಕುಮಾರ್, ಕೃಷ್ಣಬೈರೇಗೌಡ ಮಂತ್ರಿಯಾಗಿದ್ದಾಗ ಯೋಜನೆ ವೇಗ ಪಡೆದುಕೊಂಡಿತು. ಅಂದಿನ ಸಿಎಂ ಸಿದ್ದರಾಮಯ್ಯ ಕೊಡುಗೆ. ಈ ಪುಣ್ಯಾತ್ಮ (ರಮೇಶ್‌ಕುಮಾರ್) ತಂದಿದ್ದು, ಎನ್ನುತ್ತಾ ಕಾಂಗ್ರೆಸ್ ಮನೆಗೆ ಬೆಂಕಿ ಹಚ್ಚುವ ಕುತಂತ್ರ ನಡೆಸುತ್ತಿದ್ದಿರಿ. ಕೆಸಿ ವ್ಯಾಲಿ ಯೋಜನೆಗೆ ನಿಮ್ಮ ಕೊಡುಗೆ ಏನು ಎಂದು ವಾಗ್ದಾಳಿ ನಡೆಸಿದರು.
    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು ಕುಟುಂಬ ರಾಜಕಾರಣ ಎನ್ನುವ ನೀವು ಯಾವ ರಾಜಕಾರಣ ಮಾಡಲು ಕಾಂಗ್ರೆಸ್‌ಗೆ ಬರುತ್ತೀದ್ದೀರಿ? ಕಾಂಗ್ರೆಸ್‌ಗೆ ನೀವು ಬೇಡ, ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯಾರೂ ಸಿದ್ಧರಿಲ್ಲ ಎಂದರು.

    ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್ ಮಾತನಾಡಿ, ಶಾಸಕ ಶ್ರೀನಿವಾಸಗೌಡ ಮಗನಿಗೆ ಜಿಪಂಗೆ ಕಾಂಗ್ರೆಸ್ ಟಿಕೆಟ್‌ಗಾಗಿ ತಮ್ಮ ಚಾರಿತ್ರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಕೆಎಚ್‌ಎಂ ತೆಗಳುವುದೇ ಶ್ರೀನಿವಾಸಗೌಡ ಟೀಂನ ಅಜೆಂಡಾ. ಇದು ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು. ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಎಚ್.ವಿ.ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತ ಘಟಕದ ಮುಖಂಡ ಇಕ್ಬಾಲ್ ಅಹಮದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts