More

    ಕೈಗಾರಿಕಾ ಅದಾಲತ್ ಆರಂಭಿಸಲು ಚಿಂತನೆ

    ಹುಬ್ಬಳ್ಳಿ: ಕೈಗಾರಿಕಾ ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಇತ್ಯರ್ಥಪಡಿಸುವ ಸಲುವಾಗಿ ಕೈಗಾರಿಕಾ ಅದಾಲತ್ ಆರಂಭಿಸುವ ಚಿಂತನೆ ಇದೆ ಎಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನೂತನ ನ್ಯಾಯಾಲಯದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆಐಎಡಿಬಿಯಲ್ಲೇ ಹಲವು ಪ್ರಕರಣಗಳು ಬಾಕಿ ಇರುವ ಕುರಿತು ಚರ್ಚೆ ನಡೆದಿದೆ. ಕೈಗಾರಿಕಾ ಅದಾಲತ್ ಆರಂಭಿಸುವ ಮೂಲಕ ಆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬಹುದಾಗಿದೆ ಎಂದರು.

    ನ್ಯಾಯಾಲಯಗಳು ಸಂವಿಧಾನದ ದೊಡ್ಡ ಶಕ್ತಿ. ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿವೆ. ಹಲವು ವರ್ಷಗಳಿಂದ ಬಾಕಿ ಇದ್ದ ರಾಮಮಂದಿರ ಸಮಸ್ಯೆ ಬಗೆಹರಿಸುವ ಮೂಲಕ ಎಲ್ಲರೂ ಒಪ್ಪುವಂಥ ತೀರ್ಪು ನೀಡಿದ್ದು ಈಗ ಇತಿಹಾಸ.

    ಹೊಸ ನ್ಯಾಯಾಲಯದ ಭೂಮಿ ಕುರಿತು ವ್ಯಾಜ್ಯಗಳಿದ್ದವು. ಅವುಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ನಿರ್ವಿುಸಲಾದ ನ್ಯಾಯಾಲಯ ಈಗ ದೇಶದ ಮಾದರಿ ನ್ಯಾಯಾಲಯವಾಗಿದೆ. ನಾನು ಹುಬ್ಬಳ್ಳಿ ವಕೀಲರ ಸಂಘದ ಓರ್ವ ಸದಸ್ಯ ಎಂಬುದು ಹೆಮ್ಮೆಯ ವಿಷಯ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ನ್ಯಾಯಾಲಯಗಳಲ್ಲಿ 10, 15 ವರ್ಷಗಳಿಂದ ಅನೇಕ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಅಂತಹವುಗಳನ್ನು ಶೀಘ್ರ ವಿಲೇವಾರಿ ಮಾಡುವ ಜವಾಬ್ದಾರಿ ನ್ಯಾಯಾಂಗಕ್ಕೆ ಇದ್ದು, ಅದಕ್ಕೆ ಅಗತ್ಯ ಸೌಲಭ್ಯ ಒದಗಿಸುವುದು ಕಾರ್ಯಾಂಗದ ಕೆಲಸವಾಗಿದೆ ಎಂದರು.

    ಇಂತಹ ಸುಸಜ್ಜಿತ ನ್ಯಾಯಾಲಯ ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೂಲೆ ಕಂಡ ಕೂಡಲೇ ಎಲೆ ಅಡಕೆ, ಗುಟಖಾ ತಿಂದು ಉಗಿಯುವ ಗುಣ ನಮ್ಮ ಉತ್ತರ ಕರ್ನಾಟಕದ ಹಲವು ಮಂದಿಗಿದೆ. ಎಲ್ಲರೂ ಒಗ್ಗಟ್ಟಾಗಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದರು.

    ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ, ರಾಮ ಮೋಹನ ರೆಡ್ಡಿ, ಬೆಂಗಳೂರು ಗ್ರಾಮೀಣ

    ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶ್ರೀಶಾನಂದ, ವಿಶ್ರಾಂತ ನ್ಯಾಯಾಧೀಶ ಕೆ.ಎಸ್. ಬೀಳಗಿ, ಹೈದರಾಬಾದ್​ನ ಕೆಎಂವಿ ಪ್ರಾಜೆಕ್ಟ್ ನಿರ್ದೇಶಕ ಜಿ. ಹರ್ಷ ಅವರನ್ನು ಸನ್ಮಾನಿಸಲಾಯಿತು.

    ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು. ಪ್ರಿಯಾ ಕಂಬಾಳಿಮಠ ಪ್ರಾರ್ಥಿಸಿದರು. ಎಸ್.ವಿ. ಕೊಪ್ಪರ ಸ್ವಾಗತಿಸಿದರು. ಬಿ.ವಿ. ಕೋರಿಮಠ ನಿರೂಪಿಸಿದರು.

    ಎಸಿ ದುರಸ್ತಿಗೆ 74 ಲಕ್ಷ ರೂ.: ಪ್ರವಾಹದ ಸಂದರ್ಭ ಕೋರ್ಟ್ ಆವರಣಕ್ಕೆ ನೀರು ನುಗ್ಗಿದ್ದರಿಂದ ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ ಹಾಳಾಗಿದೆ. ಇದರ ದುರಸ್ತಿಗಾಗಿ ಸರ್ಕಾರದಿಂದ 74 ಲಕ್ಷ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯವಾಗಲಿದೆ. ಇ ಲೈಬ್ರರಿ ಆರಂಭಕ್ಕಾಗಿ ಶಾಸಕರ ಅನುದಾನದಡಿ 15 ಲಕ್ಷ ರೂ. ನೀಡಲಾಗುತ್ತಿದೆ ಎಂದು ಸಚಿವ ಶೆಟ್ಟರ್ ತಿಳಿಸಿದರು.

    ಶೀಘ್ರ ಚತುಷ್ಪಥ ರಸ್ತೆ: ಕೋರ್ಟ್ ವೃತ್ತದಿಂದ ಹೊಸೂರು ವೃತ್ತದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಹೊಸೂರು ವೃತ್ತದ ಬಳಿ ರಸ್ತೆಬದಿ ಕೆಲ ಕುಟುಂಬಗಳು ವಾಸವಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿನ ನಿವಾಸಿಗಳಿಗೆ ಬೇರೆಡೆ ವಸತಿ ಸೌಕರ್ಯ ಒದಗಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಶೆಟ್ಟರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts