More

    ಕೇಡರ್ ಬೇಸ್ಡ್ ಪಕ್ಷವಾಗಲು ಸಜ್ಜಾಯ್ತು ಕಾಂಗ್ರೆಸ್!

    ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್​ನಲ್ಲಿ ಸೋಮವಾರ ಆಯೋಜಿಸಿದ್ದ ಕೆಪಿಸಿಸಿ ಬೆಳಗಾವಿ ವಿಭಾಗದ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಕೇಡರ್ ಬೇಸ್ಡ್ (ಕಾರ್ಯಕರ್ತರ ಆಧಾರಿತ) ಪಕ್ಷವನ್ನಾಗಿ ರೂಪಿಸುವ ಸೂಚನೆ ಸ್ಪಷ್ಟವಾಗಿ ಗೋಚರಿಸಿತು.

    ‘ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್ ಅನ್ನು ಕೇಡರ್ ಬೇಸ್ಡ್ ಪಕ್ಷವಾಗಿ ರೂಪಿಸಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕರೆ ನೀಡಿದ್ದು ಇದಕ್ಕೆ ಪುಷ್ಟಿ ನೀಡುವಂತಿತ್ತು.

    ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ ಸೇರಿದಂತೆ 8 ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು, ಮುಂಚೂಣಿ ಘಟಕ, ವಿಭಾಗಗಳ ಅಧ್ಯಕ್ಷರು ಸೇರಿದಂತೆ 500ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಇಡೀ ದಿನ ನಡೆದ ಸಮಾವೇಶದಲ್ಲಿ ಶಿಸ್ತು ಹಾಗೂ ಆಪ್ತವಾದ ವಾತಾವರಣ ಕಂಡುಬಂದಿತು.

    ಮುಂಬರುವ ಉಪ ಚುನಾವಣೆಗಳು, 2023ರ ವಿಧಾನಸಭೆ ಚುನಾವಣೆ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಮುಖಂಡರು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳ ವಿರುದ್ಧ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು, ಮಹದಾಯಿ ಮೊದಲಾದ ವಿಷಯಗಳ ಕುರಿತು ಹೋರಾಟ ನಡೆಸಲು ಕರೆ ನೀಡಿದರು.

    ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಸ್.ಆರ್. ಪಾಟೀಲ ಅವರೆದುರು ಆಯ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಲಾಗಿತ್ತು. ಮುಖಂಡರಿಗೂ ಮಾತನಾಡಲು ತಲಾ 5 ನಿಮಿಷ ಸಮಯ ನಿಗದಿಪಡಿಸಲಾಗಿತ್ತು. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರೇ ಸಂಪೂರ್ಣ ಸಮಾವೇಶವನ್ನು ನಿಯಂತ್ರಿಸಿದರು.

    ಡಿಜಿಟಲ್ ಪರದೆಯಲ್ಲಿ ಕಾಂಗ್ರೆಸ್ ಸಾಧನೆ

    ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್ ಡಿಜಿಟಲ್ ಪರದೆಯ ಮೇಲೆ ಸಮಾವೇಶದ ಆರಂಭಕ್ಕೂ ಪೂರ್ವ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಪ್ರಚುರ ಪಡಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದಾಗ ಇದ್ದ ಸ್ಥಿತಿಯಿಂದ ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ತೋರಿಸಲಾಯಿತು. ಐಐಟಿ, ಐಐಎಂ ಸ್ಥಾಪನೆ, ವಿಶ್ವವಿದ್ಯಾಲಯಗಳ ನಿರ್ವಣ, ಗ್ರಾಮೀಣ ಭಾಗಗಳಲ್ಲಿ ಶಾಲೆ, ಮೆಟ್ರೋ ರೈಲು, ಇತ್ಯಾದಿ ಸಾಧನೆಗಳನ್ನು ಬಿಂಬಿಸಲಾಯಿತು. 60 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಇಂದಿನ ಬಿಜೆಪಿ ಆಡಳಿತ ತಿರುಗೇಟು ನೀಡುವ ಪ್ರಯತ್ನ ಅದಾಗಿತ್ತು.

    3 ನಿಮಿಷ ಅವಕಾಶ

    ಬೆಳಗಾವಿ ವಿಭಾಗ ಮಟ್ಟದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ ಒಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗೆ 3 ನಿಮಿಷ ಮಾತನಾಡಲು ಅವಕಾಶ ನೀಡಲಾಗಿತ್ತು. ಕ್ಷೇತ್ರದ ಸಮಸ್ಯೆ ಹಾಗೂ ಮುಂದಿನ ಕೈಗೊಳ್ಳಬಹುದಾದ ಹೋರಾಟದ ಬಗ್ಗೆ ಮಾಹಿತಿ ಪಡೆಯಲಾಯಿತು.

    ಗರಂ ಆದ ಡಿಕೆಶಿ

    ಸಮಾವೇಶದ ಸಭಾಂಗಣದಲ್ಲಿ ನಾಯಕರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಮೊಬೈಲ್​ನಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದದ್ದನ್ನು ಕಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಗರಂ ಆದರು. ನಿಮಗೆ ನಿಗದಿಪಡಿಸಿರುವ ಖುರ್ಚಿಯಲ್ಲಿ ಆಸೀನರಾಗಿ, ಆಹ್ವಾನಿತರಲ್ಲದವರು ಸಭೆಯಿಂದ ಹೊರಗೆ ನಡೆಯಿರಿ. ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಲು ಅವಕಾಶವಿಲ್ಲ. ಇದು ಬಿಸಿನೆಸ್ ಟೈಪ್ ಸೇಷನ್. ಎಲ್ಲರೂ ಶಿಸ್ತಿನಂತೆ ವರ್ತಿಸಬೇಕೆಂದು ಹೇಳುವ ಮೂಲಕ ಶಿವಕುಮಾರ ಅವರು ಸಮಾವೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts