More

    ಕೇಂದ್ರ ಕೊಟ್ಟರೂ, ಕೈಗೆ ಸಿಗಲಿಲ್ಲ ವೇತನ

    ಗಣೇಶ್ ಮಾವಂಜಿ, ಸುಳ್ಯ
    ಕಿರಿಯ ಆರೋಗ್ಯ ಸಹಾಯಕರು ಆರೋಗ್ಯ ಇಲಾಖೆಯ ಆಧಾರಸ್ತಂಭಗಳು ಎಂಬ ಮಾತಿದೆ. ಆದರೆ ಇವರಿಗೆ ಕಾಲಕಾಲಕ್ಕೆ ಸರಿಯಾಗಿ ವೇತನವೇ ಆಗುತ್ತಿಲ್ಲ. ಕೋವಿಡ್ ಸಂದರ್ಭ ಕೊಂಚ ಏರುಪೇರಾಗುವುದಿ ಸಹಜ ಎಂದು ಭಾವಿಸಿದರೆ ತಪ್ಪಾದೀತು. ಪ್ರತಿ ಸಲವೂ ಸಂಬಳಕ್ಕಾಗಿ ಕಾಯುವಿಕೆ ಈ ವರ್ಗಕ್ಕೆ ಹೊಸತಲ್ಲ.
    ಪ್ರಸಕ್ತ ಕರೊನಾ ಪ್ರಕರಣ ಹೆಚ್ಚುತ್ತಿದ್ದು, ಕಿರಿಯ ಆರೋಗ್ಯ ಸಹಾಯಕರಿಗೆ ಬಿಡುವಿಲ್ಲದ ಕೆಲಸ. ಹಾಗಿದ್ದರೂ ಮೂರು ತಿಂಗಳಿಂದ ಸಂಬಳ ಸಿಕ್ಕಿಲ್ಲ. ವೇತನ ವಿಳಂಬ ಕಾರಣದಿಂದ ಜೀವನ ನಿರ್ವಹಣೆಯೇ ಕಷ್ಟ ಎನ್ನುತ್ತಾರೆ ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಸಹಾಯಕರು.

    ಈ ವರ್ಗದ ನೌಕರರಿಗೆ ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ವೇತನದ ಕಂತು ಬಿಡುಗಡೆ ಮಾಡುತ್ತದೆ. ಅದರ ಖರ್ಚಿನ ವಿವರಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಸಕಾಲದಲ್ಲಿ ಸಲ್ಲಿಸಿದರೆ ಹಣ ಶೀಘ್ರ ಬಿಡುಗಡೆಯಾಗುತ್ತದೆ. ಆದರೆ, ಈ ವಿವರಗಳನ್ನು ಸಲ್ಲಿಸುವಲ್ಲಿ ಆಗುತ್ತಿರುವ ವಿಳಂಬವೇ ವೇತನ ಬಿಡುಗಡೆ ವಿಳಂಬಕ್ಕೆ ಕಾರಣ ಎಂಬ ಆರೋಪವಿದೆ. ಎಲ್ಲ ಜಿಲ್ಲೆಗಳೂ ಏಕಕಾಲಕ್ಕೆ ಈ ಖರ್ಚಿನ ವಿವರ ಸಲ್ಲಿಸಬೇಕು. ಒಂದು ಜಿಲ್ಲೆಯವರು ತಡವಾಗಿ ಸಲ್ಲಿಸಿದರೂ, ರಾಜ್ಯದ ಕಿರಿಯ ಆರೋಗ್ಯ ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕರು ಸೇರಿ ಇತರ ವರ್ಗದ ನೌಕರರಿಗೆ ವೇತನ ಸಿಗುವುದಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿಲ್ಲ.

    ಮಿತಿಮೀರಿದ ಕೆಲಸದ ಹೊರೆ: ಆರೋಗ್ಯ ಇಲಾಖೆ ಅನುಷ್ಠಾನಗೊಳಿಸಬೇಕಾದ 27ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿವೆ. ಅವೆಲ್ಲವನ್ನೂ ಸಮರ್ಪಕವಾಗಿ ಜಾರಿ ಮಾಡಬೇಕಾದ ಹೊಣೆ ಈ ಕಿರಿಯ ಆರೋಗ್ಯ ಸಹಾಯಕರದು. ಇಲಾಖೆ ಹೊಸ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಇದೇ ನೌಕರರು ಬೇಕು. ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ. ವರ್ಷದಿಂದ ವರ್ಷಕ್ಕೆ ಕೆಲಸದ ಹೊರೆ ಹೆಚ್ಚಾಗುತ್ತಿದೆ. ಇದರ ನಡುವೆ ವೇತನವನ್ನೂ ಸರಿಯಾಗಿ ನೀಡದಿದ್ದರೆ ಕೆಲಸ ಮಾಡುವುದಾದರೂ ಹೇಗೆ ಎನ್ನುವುದು ಹೆಸರು ಹೇಳಲಿಚ್ಛಿಸದ ಕಿರಿಯ ಆರೋಗ್ಯ ಸಹಾಯಕಿಯರೊಬ್ಬರ ಪ್ರಶ್ನೆ. ವೇತನ ವಿಳಂಬ ಬಗ್ಗೆ ಮೇಲಧಿಕಾರಿಗಳ ಮೊರೆಹೋದರೆ ಸಿಗುವುದು ಹಾರಿಕೆಯ ಉತ್ತರ.

    ಉಡುಪಿಯಲ್ಲಿಯೂ ಸಮಸ್ಯೆ: ಕಾಯಂ ಮತ್ತು ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಮೊದಲಿನಿಂದಲೂ ವೇತನ ಎರಡು-ಮೂರು ತಿಂಗಳು ವ್ಯತ್ಯಾಸವಾಗುತ್ತದೆ
    ಎಂದು ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಮುಖಂಡರು ತಿಳಿಸಿದ್ದಾರೆ. ಕೆಲವೊಮ್ಮೆ ಸಕಾಲಿಕ ವೇತನ ನಿಡಲಾಗುತ್ತಿದೆ. ಸದ್ಯ ಕೋವಿಡ್‌ಗೆ ನೇಮಕಾತಿಗೊಂಡ ತಾತ್ಕಲಿಕ ಸಿಬ್ಬಂದಿಗೆ ಆರಂಭದಿಂದಲೂ ವೇತನ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದೇವೆ. ಪ್ರತಿ ತಿಂಗಳು ವ್ಯವಸ್ಥಿತವಾಗಿ ವೇತನ ಪಾವತಿಸುವ ಭರವಸೆ ಲಭಿಸಿದೆ ಎಂದವರು ತಿಳಿಸಿದ್ದಾರೆ.

    ಕಿರಿಯ ಆರೋಗ್ಯ ಸಹಾಯಕ, ಸಹಾಯಕಿಯರು ಜನರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕೊಂಡಿಯಂತೆ ಕೆಲಸ ಮಾಡುತ್ತಾರೆ. ಆರೋಗ್ಯ ಇಲಾಖೆ ಸವಲತ್ತುಗಳು ಜನರಿಗೆ ತಲುಪುವಲ್ಲಿ ಈ ವರ್ಗದ ಜನರ ಕಾರ್ಯ ಮುಖ್ಯ. ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆಗೆ ಇಳಿಯುವುದಿಲ್ಲ. ಆರೋಗ್ಯ ಇಲಾಖೆಯ ಇತರ ನೌಕರರು ಸರಿಯಾಗಿ ಸಂಬಳ ತೆಗೆದುಕೊಳ್ಳುತ್ತಿರಬೇಕಾದರೆ, ಸರ್ಕಾರ ನಮಗ್ಯಾಕೆ ತಾರತಮ್ಯ ಮಾಡುತ್ತಿದೆ?
    ಪ್ರದೀಪ್ ಕುಮಾರ್ ಜಿಲ್ಲಾಧ್ಯಕ್ಷ, ಕಿರಿಯ ಆರೋಗ್ಯ ಸಹಾಯಕರು ಹಾಗೂ ಮೇಲ್ವಿಚಾರಕರ ಸಂಘ

    ಕಿರಿಯ ಆರೋಗ್ಯ ಸಹಾಯಕಿಯರಿಗೆ ಹಾಗೂ ಸಹಾಯಕರಿಗೆ ಸಂಬಳ ವಿಳಂಬ ನಿಜ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣ ರಾಜ್ಯ ಆರೋಗ್ಯ ಇಲಾಖೆಗೆ ಬಂದು, ಜಿಪಂಗೆ ಬಿಡುಗಡೆಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಖಜಾನೆಗೂ ಬಂದಿದೆ. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮೂರ‌್ನಾಲ್ಕು ದಿನಗಳಲ್ಲಿ ನೌಕರರ ಖಾತೆಗೆ ಹಣ ಜಮಾವಣೆಯಾಗಲಿದೆ.
    ಕಿಶೋರ್ ಕುಮಾರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts