More

    ಕೇಂದ್ರ ಕಾರಾಗೃಹಕ್ಕೆ ಚಂದ್ರಶೇಖರ ಇಂಡಿ

    ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಗುರುವಾರ ಹಲವರನ್ನು ಉಪನಗರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

    ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹಾಗೂ ಡೇರಿ ಉಸ್ತುವಾರಿ ನೋಡಿಕೊಳ್ಳುವ ನಟರಾಜ್ ಅವರನ್ನು ಗುರುವಾರವೂ ವಿಚಾರಣೆಗೊಳಪಡಿಸಿದರು. ನಟರಾಜ್ ಮತ್ತು ವಿಜಯ ಬೆಳಗ್ಗೆ 11 ಗಂಟೆಗೆ ಒಂದೇ ಕಾರಿನಲ್ಲಿ ಬಂದು ವಿಚಾರಣೆಗೆ ಹಾಜರಾಗಿ 12 ಗಂಟೆ ಸುಮಾರಿಗೆ ಜತೆಯಾಗಿಯೇ ತೆರಳಿದರು.

    ಸಂಜೆ 4.20ರ ಸುಮಾರಿಗೆ ನಟರಾಜ್ ಮತ್ತೆ ಠಾಣೆಗೆ ಹೋದರು. ಅವರು ಇದೇ ಮೊದಲ ಬಾರಿ ಕೈಚೀಲವೊಂದರಲ್ಲಿ ಕೆಲ ದಾಖಲೆಗಳನ್ನು ಹಿಡಿದುಕೊಂಡು ವಿಚಾರಣೆಗೆ ಹಾಜರಾಗಿದ್ದರು.

    ಈ ಮಧ್ಯೆ, ಕೊಲೆಗೆ ಶಸ್ತ್ರಾಸ್ತ್ರ ಪೂರೈಸಿರುವ ಆರೋಪದಡಿ ಬಂಧಿತರಾಗಿರುವ ವಿನಯ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿಯ ಸಿಬಿಐ ಕಸ್ಟಡಿ ಗುರುವಾರ ಅಂತ್ಯಗೊಂಡಿತು. ನ್ಯಾಯಾಲಯದ ಆದೇಶದಂತೆ ಕಸ್ಟಡಿಗೆ ಪಡೆದಿದ್ದ ಸಿಬಿಐ ಅಧಿಕಾರಿಗಳು, 2 ದಿನ ಉಪನಗರ ಠಾಣೆಯಲ್ಲಿಯೇ ವಿಚಾರಣೆಗೊಳಪಡಿಸಿದರು. ಗುರುವಾರ ಮಧ್ಯಾಹ್ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

    ಡಿ. 19ರಂದು ಕುಟುಂಬದವರನ್ನು ಭೇಟಿಯಾಗಲು ಅವಕಾಶ ನೀಡಿದ ನ್ಯಾಯಾಲಯ, ನ್ಯಾಯಾಂಗ ಬಂಧನ ಮುಂದುವರಿಸಿ ಆದೇಶಿಸಿತು. ಇಂಡಿಗೆ ಈ ಮೊದಲು ಡಿ. 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂಡಿಯನ್ನು ಸಿಬಿಐ ಅಧಿಕಾರಿಗಳು ಪೊಲೀಸ್ ವಾಹನದಲ್ಲಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಹಸ್ತಾಂತರಿಸಿದರು.

    ಹಳೇ ಆರೋಪಿಗಳಿಗೆ ಬುಲಾವ್

    ಇದೇ ವೇಳೆ ಸಿಬಿಐ ಅಧಿಕಾರಿಗಳು ಪೊಲೀಸ್ ತನಿಖೆಯಲ್ಲಿ ಬಂಧಿತರಾಗಿ ಜಾಮೀನು ಪಡೆದಿರುವ ಆರೋಪಿಗಳನ್ನು ಉಪನಗರ ಠಾಣೆಗೆ ಕರೆಸಿದ್ದರು. ಬಸವರಾಜ ಮುತ್ತಗಿ, ಕೀರ್ತಿಕುಮಾರ ಕುರಹಟ್ಟಿ, ಮಹಾಬಳೇಶ ಹೊಂಗಲ, ವಿನಾಯಕ ಕಟಗಿ, ಸಂದೀಪ ಸವದತ್ತಿ ಪೊಲೀಸ್ ತನಿಖೆಯಲ್ಲಿ ಆರೋಪಿಗಳಾಗಿದ್ದರು. ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ವಿಕಾಸ ಕಲಬುರ್ಗಿ ಎಂಬಾತನ ಮೇಲೂ ಕೆಲ ಆರೋಪಗಳಿದ್ದು, ಎಲ್ಲರನ್ನೂ ಸುದೀರ್ಘ ವಿಚಾರಣೆಗೆ ಒಳಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts