More

    ಕೇಂದ್ರದಲ್ಲೂ ಕೈ ಅಧಿಕಾರಕ್ಕೆ ತನ್ನಿ -ಕಾರ್ಯಕರ್ತರಿಗೆ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ -ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ 

    ದಾವಣಗೆರೆ: ವಿಧಾನಸಭೆ ಚುನಾವಣೆ ಗೆಲುವು ಸಾಧಿಸಿದ ಕಾರ್ಯಕರ್ತರು ಮೈಮರೆಯುವುದು ಬೇಡ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ಹೊಣೆ ನಿಭಾಯಿಸಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.
    ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಂಚೂಣಿ ಘಟಕಗಳ ಒಕ್ಕೂಟದಿಂದ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿ, ಕಾಂಗ್ರೆಸ್‌ನ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುತ್ತ ಬಿಜೆಪಿ ಸೋಲಿಸಲು ಪಣ ತೊಡಬೇಕು ಎಂದು ಹೇಳಿದರು.
    ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಪೈಕಿ ಸರ್ಕಾರ ನಾಲ್ಕನ್ನು ಈಡೇರಿಸಿದೆ. ಶಕ್ತಿ ಯೋಜನೆ ಯಶಸ್ಸು ಕಂಡಿದ್ದು ಮಹಿಳೆಯರು ತೀರ್ಥಕ್ಷೇತ್ರಗಳಲ್ಲೂ ಸಂಚರಿಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಹಣ ನೀಡುವ ಯುವನಿಧಿ ಯೋಜನೆ ಡಿಸೆಂಬರ್ ವೇಳೆಗೆ ಜಾರಿಯಾಗಲಿದ್ದು ಮಾತು ಕೊಟ್ಟಂತೆ ನಾವು ನಡೆದಿದ್ದೇವೆ ಎಂದರು.
    ಸದನದಲ್ಲಿ ಬಿಜೆಪಿ ಶಾಸಕರು ಕಲಾಪಕ್ಕೆ ಬಹಿಷ್ಕಾರ ಹಾಕುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋಡ್ಸೆ ಪ್ರತಿಮೆ ಮುಂದೆ ಧರಣಿ ನಡೆಸಲು ಉತ್ತಮ ಸಲಹೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
    ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಕಾರ್ಯಕರ್ತರು, ಮುಖಂಡರಿಗೆ ಮೊದಲು ಗೌರವ ನೀಡಬೇಕಿದೆ. ಅವರಿಗೆ ನೋವಾಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.
    ಕೆಲಸಗಾರರಿಗೆ ಪಕ್ಷದಲ್ಲಿ ಸ್ಥಾನಮಾನ ಸಿಗಲಿದೆಯೇ ಹೊರತಾಗಿ ಮೇಕಪ್ ಮಾಡಿಕೊಂಡು ಬರುವವರಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ನೋಂದಣಿಗೆ ಮಹಿಳಾ ಕಾರ್ಯಕರ್ತರು ಮುಂದಾಗಬೇಕು. ಕೇಂದ್ರದಲ್ಲಿ ನಮಗೆ ಅಧಿಕಾರ ಸಿಗಬೇಕಾದರೆ ಕಾರ್ಯಕರ್ತರು ಜನಸೇವೆಗಿಳಿಯಬೇಕು ಎಂದರು.
    ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿವೆ.ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಗೆ ಮೆತ್ತಿದ ಕಳಂಕ ತೊಡೆದು ಹಾಕಲಾಗುವುದು ಎಂದು ತಿಳಿಸಿದರು.
    ಜಗಳೂರು ಶಾಸಕ ಕೆ.ಎನ್.ದೇವೇಂದ್ರಪ್ಪ ಮಾತನಾಡಿ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆ ಕಾರ್ಯಕ್ರಮ ಇತಿಹಾಸ ಸೃಷ್ಟಿಸಿತು. ಅಂದು ಸೇರಿದ್ದ ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಲು ನಿಶ್ಚಯಿಸಿದರು. ಶೇ 40ರ ಕಮಿಷನ್ ಆರೋಪದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಕಾಂಗ್ರೆಸ್‌ಗೆ ಬಹುಮತ ನೀಡಿದರು ಎಂದು ಹೇಳಿದರು.
    ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಬಿಜೆಪಿ ಸಂವಿಧಾನದ ಹಕ್ಕುಗಳನ್ನು ಕಿತ್ತುಕೊಂಡಿತು. ಆದರೆ ಹಿಂದು ಮುಸ್ಲಿಮರು ಅಣ್ಣ-ತಮ್ಮಂದಿರು ಎಂದು ಕಾಂಗ್ರೆಸ್ ಭಾವಿಸಿ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20 ಸ್ಥಾನ ಗೆಲ್ಲಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಹೇಳಿದರು.
    ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕಾಂಗ್ರೆಸ್ ಜನಪ್ರಿಯತೆ ಹೆಚ್ಚಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪಡಿತರ ಅಕ್ಕಿ ನೀಡದೆ ಮಲತಾಯಿ ಧೋರಣೆ ಅನುಸರಿಸಿದೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಹೀಗಾಗಿ ಎಲ್ಲ ಮುಂಚೂಣಿ ಘಟಕದ ಅಧ್ಯಕ್ಷರೂ ಸರ್ಕಾರದ ಭಾಗವಾಗಬೇಕು ಎಂದು ಆಶಿಸಿದರು.
    ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರಾದ ಸೈಯದ್ ಸೈಫುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಾಜಿ ಶಾಸಕ ಎಸ್.ರಾಮಪ್ಪ, ಅನಿತಾಬಾಯಿ ಮಾಲತೇಶ್, ಮುಂಚೂಣಿ ಘಟಕದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಎಸ್.ಮಲ್ಲಿಕಾರ್ಜುನ್, ಡೋಲಿ ಚಂದ್ರು, ಶಾಮನೂರು ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts