More

    ಕೆಸರು ಗದ್ದೆಯಾದ ಬಸವಸಾಗರ ಜಲಾಶಯ ರಸ್ತೆ

    ನಾಲತವಾಡ: ನಾಲತವಾಡ- ಆರೇಶಂಕರ ಮೂಲಕ ಬಸವಸಾಗರ ನಾರಾಯಣಪುರ ಜಲಾಶಯಕ್ಕೆ ತೆರಳುವ ಪ್ರಮುಖ ರಸ್ತೆ ಕೆಸರು ಗದ್ದೆಯಾಗಿದ್ದು ದುರಸ್ತಿಗೆ ವಾರಸುದಾರರೇ ಇಲ್ಲ ಎನ್ನುವಂತಾಗಿದೆ.

    ಸುಮಾರು 4ಕಿಮೀ ದೂರದ ಈ ರಸ್ತೆ 10 ವರ್ಷಗಳ ಹಿಂದೆ ದುರಸ್ತಿ ಕಂಡಿತ್ತು. ಈಗ ಬಸವಸಾಗರ ಜಲಾಶಯಕ್ಕೆ ತೆರಳಲು ದಾರಿ ಯಾವುದಯ್ಯ ಎನ್ನುವಂತಾಗಿದೆ. ಸಂಬಂಧಿಸಿದ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಬಹುತೇಕ ಈ ರಸ್ತೆಯ ನೆನಪು ಇಲ್ಲ ಎನ್ನುವಂತಿದೆ.
    ಬಸವಸಾಗರ ಜಲಾಶಯ ಈ ಭಾಗದ ಪ್ರವಾಸಿತಾಣವಾಗಿದ್ದು, ಇದೇ ಮಾರ್ಗದಿಂದ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.

    ರಾಯಚೂರ, ಲಿಂಗಸೂರ ಮಾರ್ಗದ ಪ್ರವಾಸಿಗರು ಹಾಗೂ ನಾಲತವಾಡ, ವೀರೇಶನಗರ ನಾಗಬೇನಾಳ ರೈತರ ಪ್ರಮುಖ ರಸ್ತೆ ಇದಾಗಿದೆ. ಸದ್ಯ ಜಿಟಿಜಿಟಿ ಮಳೆಯ ಹೊಡೆತಕ್ಕೆ ಎಲ್ಲೆಂದರಲ್ಲಿ ತಗ್ಗು ದಿನ್ನೆಗಳು ಕಾಣಿಸಿಕೊಂಡಿವೆ. ತಗ್ಗುಗಳಲ್ಲಿ ನಿಂತ ಅಪಾರ ನೀರು ಕೆಸರು ಗದ್ದೆಯಾಗಿದ್ದು ಭತ್ತ ಬೆಳೆಯುವ ಜಮೀನಿನಂತೆ ಗೋಚರಿಸುತ್ತಿದೆ.

    ವಾರುಸುದಾರರು ಇಲ್ಲವಂತೆ: ಇದೇ ಮಾರ್ಗದ ಮೂಲಕ ಮುದ್ದೇಬಿಹಾಳ ತಾಲೂಕಿಗೆ ಬೆಳಕು ನೀಡುತ್ತಿರುವ ಮುರ್ಡೆಶ್ವರ ವಿದ್ಯುತ್ ಉತ್ಪಾದನಾ ಘಟಕವಿದೆ. ಪಕ್ಕದಲ್ಲಿ ಜಲಾಶಯವಿದೆ. ಇನ್ನೊಂದು ಪಕ್ಕದಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ನೀರು ಹರಿಸುವ ಘಟಕವಿದೆ. ಇಷ್ಟೆಲ್ಲ ಯೋಜನೆಗಳು ಇದ್ದರೂ ಇವುಗಳನ್ನು ತಲುಪಲು ಕೆಸರು, ಗದ್ದೆ, ಕಲ್ಲು, ಮುಳ್ಳುಗಳ ರಸ್ತೆ ದುರಸ್ತಿಗೆ ಕೆಬಿಜೆಎನ್‌ಎಲ್‌ನವರು ಮುಂದಾಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

    ಜಲಾಶಯದ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಪೀರಾಪುರ ಬೂದಿಹಾಳ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಗೊಂಡಿದ್ದ ಖಾಸಗಿ ಅಮೃತ ಕಂಪನಿಯವರು ಈ ರಸ್ತೆಯನ್ನು ಮಾನವೀಯತೆಯಿಂದ ರೈತರ ಹಾಗೂ ಸಾರ್ವಜನಿಕರ ಅಲೆದಾಟಕ್ಕೆ ಮೇಲಿಂದ ಮೇಲೆ ದುರಸ್ತಿ ಮಾಡುತ್ತಿದ್ದರು. ಸದ್ಯ ಕಂಪನಿಯ ಕಾಮಗಾರಿ ಮುಕ್ತಾಯಗೊಂಡಿದೆ. ಈಗಲೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರಮುಖ ರಸ್ತೆ ದುರಸ್ತಿಗೆ ಮುಂದಾಗದ ಕ್ರಮ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

    ರೈತರ ಹಿತ ಚಿಂತನೆ ಮಾಡಿದ್ದ ಖಾಸಗಿ ಕಂಪನಿಯವರು ಮಾನವೀಯತೆ ಮೆರೆದು ಹದಗೆಟ್ಟ ರಸ್ತೆ ದುರಸ್ತಿ ಮಾಡಿದ್ದರು. ದೊಡ್ಡ ಡ್ಯಾಮ್ ಇದೆ ಅಂತ ಗೊತ್ತಿದ್ದರೂ ಬೇಜವಾಬ್ದಾರಿಯ ಕೆಬಿಜೆಎನ್‌ಎಲ್‌ನವರು ಈವರೆಗೂ ದುರಸ್ತಿಗೆ ಮುಂದಾಗಿಲ್ಲ. ಬಹುತೇಕ ಈ ರಸ್ತೆ ಯಾರದು ಎನ್ನುವಷ್ಟರ ಮಟ್ಟಿಗೆ ಸಂಶಯಪಟ್ಟು ವಿಚಾರಿಸುವ ಸ್ಥಿತಿ ಬಂದಿದೆ.
    ಬಸವರಾಜ ತಳವಾರ, ನಾಲತವಾಡ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts