More

    ಕೆಸರಲ್ಲಿ ಸಿಲುಕಿದ ಜೋಡೆತ್ತು

    ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಮಲಪ್ರಭಾ ಹಳೇ ಸೇತುವೆ ಬಳಿ ನದಿಯ ಕೆಸರಿನಲ್ಲಿ ಸಿಲುಕು ನರಳಾಡುತ್ತಿದ್ದ ಎರಡು ಎತ್ತುಗಳನ್ನು ರೈತರು ರಕ್ಷಿಸಿದ್ದಾರೆ.

    ಬಾದಾಮಿ ತಾಲೂಕಿನ ಗಡಿ ಗ್ರಾಮವಾದ ಗೋವನಕೊಪ್ಪದಿಂದ ನಿಂಗಪ್ಪ ಹಿರಿಗಣ್ಣವರ ಎಂಬ ರೈತ ತನ್ನೆರಡು ಎತ್ತುಗಳ ಮೈ ತೊಳೆಯಲು ಸೋಮವಾರ ಕೊಣ್ಣೂರಿನ ಮಲಪ್ರಭಾ ಹಳೇ ಸೇತುವೆ ಬಳಿಗೆ ಕರೆ ತಂದಿದ್ದನು. ಆದರೆ, ಇತ್ತೀಚೆಗೆ ನದಿ ಉಕ್ಕಿ ಹರಿದ ಪರಿಣಾಮ ಈ ಭಾಗದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ಮರಳು ಸಂಗ್ರಹಗೊಂಡಿದೆ. ಹೀಗಾಗಿ ನದಿಗೆ ಇಳಿಯುತ್ತಿದ್ದಂತೆ ಎರಡು ಎತ್ತುಗಳ ಕಾಲು ಸಂಪೂರ್ಣ ಕೆಸರಿನಲ್ಲಿ ಸಿಲುಕಿದವು. ಉಸಿರಾಟಕ್ಕೆ ಸಮಸ್ಯೆಯುಂಟಾಗಿ ಎತ್ತುಗಳು ರೋಧಿಸುತ್ತಿದ್ದವು.

    ಕೊಣ್ಣೂರಿನ ಗ್ರಾಮಸ್ಥರು ರೈತರ ನೆರವಿಗೆ ಧಾವಿಸಿ ಹಗ್ಗ ಮತ್ತು ಚಕ್ಕಡಿಯ ನೊಗದ ಸಹಾಯದಿಂದ ಕಾರ್ಯಾಚರಣೆ ನಡೆಸಿ ಎತ್ತುಗಳನ್ನು ರಕ್ಷಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಹಾರವಿಲ್ಲದೆ ಕೆಸರಿನಲ್ಲಿ ಸಿಲುಕಿ ರೋಧಿಸುತ್ತಿದ್ದ ಮೂಕ ಪ್ರಾಣಿಗಳ ಆಕ್ರಂದನ ಮನ ಕಲಕುವಂತಿತ್ತು.

    ಕೊಣ್ಣೂರ ಗ್ರಾಮದ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಮರಳು ಮಿಶ್ರಿತ ಮಣ್ಣಿನ ಕೆಸರು ಸಂಗ್ರಹಗೊಂಡಿದ್ದರಿಂದ ನದಿಯಾಚೆಗಿರುವ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ನೀರು ಕುಡಿಯಲು ತೆರಳುವ ಮೂಕ ಪ್ರಾಣಿಗಳು ಕೆಸರಲ್ಲಿ ಸಿಲುಕಿ ಯಾತನೆಪಡುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ನದಿಪಾತ್ರದ ಜನ, ಜಾನುವಾರುಗಳನ್ನು ರಕ್ಷಿಸಲು ಮುಂದಾಗಬೇಕು. ಜಾನುವಾರುಗಳ ಮೈತೊಳೆಯಲು ನದಿ ಪಕ್ಕದ ಆಯ್ದ ಸ್ಥಳಗಳಲ್ಲಿ ಹೊಳಗಟ್ಟಿಯನ್ನು ನಿರ್ವಿುಸಬೇಕು ಎಂದು ರೈತ ಮುಖಂಡ ಭೀಮಸಿ ಪೂಜಾರ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts