More

    ಕೆಲಸ ಮಾಡಲು ಆಗದಿದ್ದರೆ ನಾನೇ ವರ್ಗಾವಣೆ ಮಾಡಿಸುವೆ !

    ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವೈದ್ಯರು ಎಚ್ಚರಿಕೆ ವಹಿಸುವಂತೆ ಶಾಸಕ ಕೆ.ಮಹದೇವ್ ತಾಕೀತು ಮಾಡಿದರು.


    ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿಯೇ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಸಹ ಸಾರ್ವಜನಿಕರು ಆಸ್ಪತ್ರೆಯಲ್ಲಿನ ಕೊರತೆಯ ಬಗ್ಗೆ ದೂರು ಸಲ್ಲಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ. .ನಿಮ್ಮಿಂದ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲದಿದ್ದಲ್ಲಿ ನನಗೆ ಹೇಳಿ. ನಾನೇ ನಿಮ್ಮನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿ ಕೊಡುತ್ತೇನೆ. ಕರ್ತವ್ಯ ಲೋಪ ಎಸಗಿದಲ್ಲಿ ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಿಸುತ್ತೇನೆ ಎಂದು ಬಿಸಿ ಮುಟ್ಟಿಸಿದರು.


    ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ. ಗಬ್ಬುನಾತ ಬೀರುತ್ತಿದೆ, ಕರ್ತವ್ಯದ ವೇಳೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಖಾಸಗಿ ಚಿಕಿತ್ಸಾ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಕ್ಯಾನಿಂಗ್ ರಕ್ತ ಪರೀಕ್ಷೆ ಮತ್ತಿತರ ಪರೀಕ್ಷೆಗಳಿಗೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಇದ್ದರೂ ಖಾಸಗಿ ಸೆಂಟರ್ ಗಳಿಗೆ ಚೀಟಿ ಬರೆದು ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬರುತ್ತಿವೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಮನ ಹರಿಸದಿದ್ದಲ್ಲಿ ಎಲ್ಲರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


    ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ಹರಿಯಬಿಡುತ್ತಿದ್ದಾರೆ, ಇದಕ್ಕೆ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಹ ಆರೋಪಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ವಿಷಯ. ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡುವುದು ಬೇಡ ಎಂದರು.


    ಕರ್ತವ್ಯದ ವೇಳೆಯಲ್ಲಿ ಖಾಸಗಿ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಆರೋಪವನ್ನು ಹೊತ್ತಿರುವ ಡಾ.ಸದಾಶಿವ ರನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಇದೇ ಕೊನೇ ಎಚ್ಚರಿಕೆಯಾಗಿದ್ದು, ಮುಂದೆ ಈ ರೀತಿಯ ದೂರುಗಳು ಕೇಳಿ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೇವಿಕಾ, ವೈದ್ಯರಾದ ಡಾ.ಪ್ರಮೋದ್, ಡಾ.ಪ್ರಭು, ಡಾ.ಅನಿಲ್, ಡಾ.ಚಂದ್ರವತಿ, ಡಾ.ವಿಕ್ರಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts