More

    ಕೆಲಸವಾಗಿಲ್ಲ ಎನ್ನಲು ನಾಚಿಕೆಯಾಗಲ್ವಾ

    ನಾಗಮಂಗಲ: ಎರಡು-ಮೂರು ವರ್ಷದಿಂದ ಕೆಲಸವಾಗಿಲ್ಲ ಎಂದು ಪ್ರತಿ ಸಭೆಯಲ್ಲಿಯೂ ಹೇಳಲು ನಿಮಗೆ ನಾಚಿಕೆಯಾಗಲ್ವಾ, ಕಳೆದ ಬಾರಿ ಸಭೆಯಲ್ಲಿ ಹೇಳಿದ ಉತ್ತರವನ್ನೆ ಈ ಸಭೆಯಲ್ಲೂ ಹೇಳುತ್ತೀರಿ ಎಂದರೆ ನೀವು ದಪ್ಪ ಚರ್ಮದವರಾಗಿದ್ದು ನಾಚಿಕೆಯಾಗಲ್ವೇ ಎಂದು ಕೆಆರ್‌ಐಡಿಎಲ್ ಎಇ ಪವಿತ್ರಾ ಅವರನ್ನು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕವಿತಾ ತೀವ್ರ ತರಾಟೆಗೆ ತೆಗೆದುಕೊಂಡರು.


    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭ ಕೆಆರ್‌ಐಡಿಎಲ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


    ಎರಡು ಮೂರು ವರ್ಷದ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳು ಇದುವರೆಗೂ ಪೂರ್ಣಗೊಂಡಿಲ್ಲ. ಪ್ರತಿ ಬಾರಿ ಸಭೆ ಯಲ್ಲಿಯೂ ಹಾರಿಕೆ ಉತ್ತರ ನೀಡುತ್ತೀರಿ. ತಿರುಮಲಾಪುರ ಗ್ರಾಮದ ಪಶು ಆಸ್ಪತ್ರೆ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದು ಅನೇಕ ತಿಂಗಳುಗಳು ಕಳೆದಿವೆ. ಉಳಿದ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ ಇಲಾಖೆಗೆ ಹಸ್ತಾಂತರಿಸಲು ಎಷ್ಟು ವರ್ಷ ಬೇಕು. ಏನು ತಾಜ್‌ಮಹಲ್ ಕಟ್ಟುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದರು.


    ಕಳೆದ 2 ಸಭೆಗಳಲ್ಲಿಯೂ ಮುಂದಿನ ಸಭೆಯೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದೀರಿ. ಈ ಸಭೆಯಲ್ಲಿಯೂ ಅದೇ ಉತ್ತರ ಹೇಳಲು ನಾಚಿಕೆಯಾಗುವುದಿಲ್ಲವೇ ನಿಮಗೆ. ಪ್ರತಿ ಬಾರಿ ಸಭೆಯಲ್ಲಿಯೂ ಕೇಳಿದ ಉತ್ತರವನ್ನೇ ಕೇಳೊದಿಕ್ಕೆ ನಮಗೆ ನಾಚಿಕೆಯಾಗುತ್ತಿದೆ. ಹೇಳಿದ ಉತ್ತರವನ್ನೇ ಮತ್ತೆ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳಿದರು.


    ಸಭೆಯಲ್ಲಿ ಹೇಳಿದ ಮೇಲೆ ಕಾರ್ಯೋನ್ಮುಖರಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಜವಾಬ್ದಾರಿ ಇಲ್ಲವೇ ನಿಮಗೆ. ತಾಲೂಕು ಪಂಚಾಯಿತಿ ಹಾಗೂ ಪಶುಪಾಲನಾ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಮುಂದಿನ 10 ದಿನದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ. 10 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ವಿಳಾಸಕ್ಕೆ ಪತ್ರ ಬರೆಯಬೇಕು. ಮುಂದಿನ ಸಭೆಯಲ್ಲಿ ಮತ್ತೆ ಇದೇ ವಿಚಾರ ಪ್ರಸ್ತಾಪಿಸುವಂತೆ ಮಾಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.


    ಸಭೆಯಲ್ಲಿ ತಾಲೂಕು ಪಂಚಾಯತ್ ಇಒ ಚಂದ್ರಮೌಳಿ, ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಮೇನಕಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts