More

    ಕೆರೋಸಿನ್ ಬಳಕೆ ಕಡಿವಾಣಕ್ಕೆ ಕ್ರಮ

    ಕಾರವಾರ: ಸಬ್ಸಿಡಿ ಸೀಮೆ ಎಣ್ಣೆ ಪೂರೈಕೆ ಪ್ರಮಾಣ ಇಳಿಸಲು ಮುಂದಾಗಿರುವ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಹೊಂದಿದ್ದರೂ ಮಾಸಿಕ ತಲಾ 3 ಲೀಟರ್ ಸೀಮೆ ಎಣ್ಣೆ ಪಡೆಯುತ್ತಿರುವ ಕುಟುಂಬಗಳನ್ನು ಪತ್ತೆ ಹಚ್ಚಲು ಸೂಚಿಸಿದೆ.

    ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಸಚಿವಾಲಯದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಕೆರೋಸಿನ್ ಬಳಕೆಯನ್ನು ಹಂತ ಹಂತವಾಗಿ ಇಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಅಡುಗೆ ಸಿಲಿಂಡರ್ ಹೊಂದಿರುವವರ ದಾಖಲೆಗಳನ್ನು ನೀಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರು ಪತ್ರ ಬರೆದಿದ್ದಾರೆ. ಅಲ್ಲದೆ, ಆಯಾ ತಾಲೂಕುಗಳಲ್ಲಿ ಸಿಲಿಂಡರ್ ಹೊಂದಿದ್ದೂ, ಅನಿಲ ರಹಿತ ರೇಶನ್ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ.

    61 ಸಾವಿರ ಕಾರ್ಡ್: ಉತ್ತರ ಕನ್ನಡ ಜಿಲ್ಲೆಯಲ್ಲಿ 61 ಸಾವಿರ ಕಾರ್ಡ್​ಗಳನ್ನು ಅನಿಲ ರಹಿತ ಎಂದು ಗುರುತಿಸಲಾಗಿದೆ. ಇವರಿಗೆ ಪ್ರತಿ ಲೀಟರ್​ಗೆ 35 ರೂ. ಸಬ್ಸಿಡಿ ಬೆಲೆಯಲ್ಲಿ ಮಾಸಿಕ ತಲಾ 3 ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತಿದೆ.

    ಇನ್ನು ಅನಿಲ ಹೊಂದಿದ್ದರೂ ವಿದ್ಯುತ್ ಇಲ್ಲದಾಗ ಬಳಕೆಗೆ ಬೇಕು ಎಂಬ ಕಾರಣಕ್ಕೆ 1.24 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು. ಅವರ ಬಯೋ ಮೆಟ್ರಿಕ್ ದಾಖಲೆ (ವಿಲ್ಲಿಂಗ್​ನೆಸ್) ಪಡೆದು ಮಾಸಿಕ 1 ಲೀಟರ್ ಸೀಮೆ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಎರಡೂ ಸ್ವರೂಪದ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಜಿಲ್ಲೆಗೆ ತಿಂಗಳಿಗೆ ಮಾಸಿಕ 3 ಲಕ್ಷ ಲೀಟರ್ ಸೀಮೆ ಎಣ್ಣೆ ಪೂರೈಕೆಯಾಗುತ್ತಿದೆ. ಸದ್ಯ ಮಾಸಿಕ 1 ಲೀಟರ್ ಸೀಮೆ ಎಣ್ಣೆ ಪಡೆಯುತ್ತಿರುವವರ ಬಗ್ಗೆ ಆಹಾರ ಇಲಾಖೆ ಆಕ್ಷೇಪವಿಲ್ಲ. 3 ಲೀಟರ್ ಸೀಮೆ ಎಣ್ಣೆ ಪಡೆಯುತ್ತಿರುವವರ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

    ಇಳಿಕೆ ಏಕೆ..?: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಲ್ಲಿ ಜಿಲ್ಲೆಯಲ್ಲಿ 1.46 ಲಕ್ಷ ಜನರಿಗೆ ಕಳೆದ ಮೂರು ವರ್ಷಗಳಲ್ಲಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಅದರಿಂದ ಅನಿಲ ರಹಿತ ಕುಟುಂಬಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ, ಜಿಲ್ಲೆಯ ಪಡಿತರದಾರರ ಲೆಕ್ಕಾಚಾರದಲ್ಲಿ ಅನಿಲ ಸಹಿತ ಕುಟುಂಬಗಳು ಹಾಗೂ ವಿತರಣೆಯಾಗುತ್ತಿರುವ ಸಿಲಿಂಡರ್ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ. ಅಲ್ಲದೆ, ದೀನ ದಯಾಳ ಉಪಾಧ್ಯಾಯ ವಿದ್ಯುದೀಕರಣ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯುತ್, ಸಿಲಿಂಡರ್ ಎರಡೂ ಇದ್ದಲ್ಲಿ ಸೀಮೆ ಎಣ್ಣೆ ಏಕೆ ಎಂಬುದು ಅಧಿಕಾರಿಗಳ ಪ್ರಶ್ನೆ.

    ಸರ್ಕಾರಕ್ಕೆ ಹೊರೆ: ಸದ್ಯ ಸರ್ಕಾರ ನೀಡುತ್ತಿರುವ ನೀಲಿ ಬಣ್ಣದ ಸೀಮೆ ಎಣ್ಣೆಗೆ ಮಾರುಕಟ್ಟೆಯಲ್ಲಿ 65 ರೂ. ಬೆಲೆ ಇದೆ. ಅದನ್ನು ಸರ್ಕಾರ ಪಡಿತರದಾರರಿಗೆ ಸಬ್ಸಿಡಿ ದರದಲ್ಲಿ 35 ರೂ.ಗೆ ನೀಡುತ್ತಿದೆ. ಅಂದರೆ ಸರ್ಕಾರಕ್ಕೆ ಪ್ರತಿ ಲೀಟರ್​ಗೆ 30 ರೂ.ವರೆಗೆ ಹೊರೆಯಾಗುತ್ತದೆ. ಪ್ರತಿ ಕಾರ್ಡ್​ಗೆ 90 ರೂ.ಗಳನ್ನು ಸರ್ಕಾರ ವ್ಯಯಿಸಬೇಕು. ಇದನ್ನು ಕಡಿಮೆ ಮಾಡಲು ಸರ್ಕಾರ ಯೋಜಿಸಿದೆ.

    ಸಬ್ಸಿಡಿ ಅಡುಗೆ ಅನಿಲ ಸಂಪರ್ಕ ಹೊಂದಿದ್ದೂ ಮಾಸಿಕ ತಲಾ 3 ಲೀಟರ್ ಸಬ್ಸಿಡಿ ಸೀಮೆ ಎಣ್ಣೆ ಪಡೆಯುತ್ತಿರುವ ಕುಟುಂಬಗಳಿದ್ದರೆ ಅಂಥವನ್ನು ಗುರುತಿಸಿ ಕೆರೋಸಿನ್ ವಿತರಣೆ ಕಡಿಮೆ ಮಾಡುವಂತೆ ಸೂಚಿಸಲಾಗಿದೆ. ಅದರಂತೆ ಗ್ಯಾಸ್ ಏಜೆನ್ಸಿಗಳಿಗೆ ಪತ್ರ ಬರೆದಿದ್ದು, ಆಧಾರ ಕಾರ್ಡ್ ದಾಖಲೆ ಒದಗಿಸುವಂತೆ ಸೂಚಿಸಿದ್ದೇನೆ. ಎಲ್ಲ ರೇಶನ್ ಕಾರ್ಡ್​ಗಳಿಗೂ ಆಧಾರ ಕಾರ್ಡ್ ಲಿಂಕ್ ಆಗಿರುವುದರಿಂದ ಅನಿಲ ರಹಿತ ಹಾಗೂ ಸಹಿತ ಕುಟುಂಬಗಳನ್ನು ಪತ್ತೆ ಹಚ್ಚುವುದು ಸುಲಭ. ಪುಟ್ಟಸ್ವಾಮಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts