More

    ಕೆರೆ ಒತ್ತುವರಿ ತೆರವಿಗಾಗಿ ಹೈಕೋರ್ಟ್​ಗೆ ಪಿಐಎಲ್

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಅತಿಕ್ರಮಿಸಿ ಕೊಂಡ ಕೆರೆಗಳ ಮೋಜಣಿ ಕಾರ್ಯ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಉಣಕಲ್ಲ ಕೆರೆ, ತೋಳನಕೆರೆ, ಧಾರವಾಡದ ಕೆಲಗೇರಿ ಕೆರೆ, ಸಾಧನಕೇರಿ ಕೆರೆ, ಕೋಳಿ ಕೆರೆಗಳ ಬಹುತೇಕ ಪ್ರದೇಶವನ್ನು ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕೀಯ ಹಿನ್ನೆಲೆಯುಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

    ಕೆರೆಗಳ ಜಾಗ ಅತಿಕ್ರಮಿಸಿಕೊಂಡಿರುವ ಬಗ್ಗೆ ಹಾಗೂ ಕೆರೆಗಳ ಅಭಿವೃದ್ಧಿ ನೆಪದಲ್ಲಿ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ದಾಖಲೆ ಸಮೇತ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಒತ್ತುವರಿ ಹಾಗೂ ಕಳಪೆ ಕಾಮಗಾರಿ ನಡೆದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು, ಸರ್ವೆ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

    ಮಹದಾಯಿ ಹೋರಾಟದ ರೂಪುರೇಷೆ ನಿರ್ಧಾರ 21ಕ್ಕೆ: ಮಹದಾಯಿ ಯೋಜನೆ ಜಾರಿ ಬಗ್ಗೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಜು. 21ಕ್ಕೆ ನಿರ್ಧರಿಸಲಾಗುವುದು ಎಂದು ವೀರೇಶ ಸೊಬರದಮಠ ಹೇಳಿದರು. ಈಗಾಗಲೇ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ 500 ಕೋಟಿ ರೂ. ಮೀಸಲಿರಿಸಿದೆ. ಹೆಚ್ಚುವರಿ ಅನುದಾನ ಪಡೆದು ಈಗಾಗಲೇ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆದರೆ, ಈಗ ಸರ್ಕಾರ ಕರೊನಾ ಸೋಂಕಿನ ನೆಪ ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹದಾಯಿ ನದಿ ನೀರಿಗಾಗಿ ನರಗುಂದದಲ್ಲಿ ಇಂದಿಗೂ ನಿರಂತರ ಹೋರಾಟ ಮುಂದುವರಿದಿದೆ ಎಂದರು.

    ರೈತ ಮುಖಂಡರಾದ ಗುರು ರಾಯನಗೌಡ್ರ, ಗಂಗಣ್ಣ ಈರೇಶನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts