More

    ಕೆರೆ ಅಭಿವೃದ್ಧಿ ಕಾಮಗಾರಿ ತಡೆದ ಗ್ರಾಮಸ್ಥರು

    ಶಿಗ್ಗಾಂವಿ: ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದ ಘಟನೆ ತಾಲೂಕಿನ ಮುಗಳಿಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ತಾಲೂಕಿನ ಮುಗಳಿಕಟ್ಟಿ ಗ್ರಾಮದ ಹಿರೆ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಗುತ್ತಿಗೆ ಪಡೆದ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಕೈಗೊಂಡಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದರಿಂದ ಕೆರೆ ಕೆಳಗಿನ ರೈತರಿಗೆ ಬೆಳೆ ಹಾನಿಯ ಆತಂಕ ಕಾಡುತ್ತಿದೆ. ಕೆರೆಯ ನೀರಿನ ಒತ್ತಡ ತಡೆಯಲು ಅಳವಡಿಸುತ್ತಿರುವ ಕಲ್ಲಿನ ಕಾಮಗಾರಿ(ಪಿಚಿಂಗ್) ಅವೈಜ್ಞಾನಿಕವಾಗಿದೆ. ಇದರಿಂದ ಕೆರೆ ದಂಡೆ ಮತ್ತಷ್ಟು ದುರ್ಬಲವಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

    ಈಗಾಗಲೇ ಕೆರೆ ತಡೆಗೋಡೆಗೆ ಅಳವಡಿಸಿರುವ ಕಾಂಕ್ರೀಟ್ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲವಡೆ ಕಿತ್ತು ಹೋಗಿದೆ. ಕಾಮಗಾರಿಯ ಕುರಿತು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದ ಗುತ್ತಿಗೆದಾರ, ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಸಂಶಯಗೊಂಡ ತಾತ್ಕಾಲಿಕವಾಗಿ ಕಾಮಗಾರಿ ತಡೆಯಲಾಗಿದೆ. ಈ ಕುರಿತು ಹಲವು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದಲ್ಲಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರಾದ ವಿರೂಪಾಕ್ಷಪ್ಪ ಕ್ಯಾಬಳ್ಳಿ, ಗದಿಗೆಪ್ಪ ಹೆಳವರ, ಜಗದೀಶ ಮಡಿವಾಳರ, ರಾಮಣ್ಣ ಕುರುಬರ, ಶರೀಫಸಾಬ ಬಸರಿಕಟ್ಟಿ, ಬಸವರಾಜ ಮಡಿವಾಳರ, ಹನುಮಂತಪ್ಪ ಕುರಬರ, ಮಂಜುನಾಥ ಕುರಬರ ಮತ್ತಿತರರು ಆಗ್ರಹಿಸಿದ್ದಾರೆ.

    ಕೆರೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳುತ್ತೇನೆ.
    | ಎಸ್.ಎನ್. ಹಾವನೂರ, ಸಹಾಯಕ ನಿರ್ದೇಶಕರ ಸಣ್ಣ ನೀರಾವರಿ ಇಲಾಖೆ

    ಲಕ್ಷಾಂತರ ರೂ.ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಗ್ರಾಮದ ಹಿರೆ ಕೆರೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು.
    | ಗದಿಗೆಪ್ಪ ಹೆಳವರ, ಸ್ಥಳೀಯ ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts