More

    ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ


    ಮಂಡ್ಯ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಬಸ್ ನಿಲ್ದಾಣದ ಎದುರು ಜಮಾಯಿಸಿದ ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಬೇಕು. ಇಂಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3ರಷ್ಟು ಇರಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೊಮ್ಮೆ ನೀಡಬೇಕು ಎಂದು ಒತ್ತಾಯಿಸಿದರು.

    ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲ ನೌಕರರಿಗೂ ಹಾಲಿ ಇರುವ ಬಾಟ, ಮಾಸಿಕ/ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಜರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲ ನಿರ್ವಾಹಕರಿಗೂ ಕ್ಯಾಷಿಯರ್‌ಗೆ ಸಮಾನವಾದ ಕ್ಯಾಷ್ ಅಲೋಯನ್ಸ್ ನೀಡಬೇಕು. ಇಎಸ್‌ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ.3.5 ಹಾಗೂ ಕಾರ್ಮಿಕರಿಂದ ಶೇ.0.5ರಷ್ಟು ವಂತಿಕೆ ಸಂಗ್ರಹಿಸಿ ಟ್ರಸ್ಟ್ ರಚಿಸುವ ಮೂಲಕ ನೌಕರರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು. ಈ ಸೌಲಭ್ಯ ನಿವೃತ್ತ ಕಾರ್ಮಿಕರು ಮತ್ತವರ ಪತ್ನಿ ಹಾಗೂ ಮಕ್ಕಳಿಗೆ ನೀಡಬೇಕು ಎಂದು ಆಗ್ರಹಿಸಿದರು.

    ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಸಂಸ್ಥೆಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು. ಎಲ್ಲ ನೌಕರರಿಗೂ ಪ್ರತಿ ತಿಂಗಳು ಹೊರರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ರೂ. ವೇತನ ನೀಡಬೇಕು. ಎಲ್ಲ ನೌಕರರಿಗೂ ಔಷಧವನ್ನು ಉಚಿತವಾಗಿ ಪೂರೈಸಬೇಕು. ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರುನೇಮಕ ಮಾಡಬೇಕು. ಲೋಕ ಅದಾಲತ್‌ನಲ್ಲಿ ಷರತ್ತುಗಳನ್ನು ಒಪ್ಪಿ ಸೇವೆಗೆ ಮರು ನೇಮಕಗೊಂಡಿರುವ ನೌಕರರಿಗೆ ಹಿಂದಿನ ದಿನಾಂಕದಿಂದ ಅನ್ವಯವಾಗುವಂತೆ ಷರತ್ತುಗಳನ್ನು ರದ್ದುಪಡಿಸಬೇಕು. ಮುಷ್ಕರದ ವೇಳೆ ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ವಾಪಸ್ ಕಳುಹಿಸಬೇಕು. ಹೆಚ್ಚುವರಿ ಕೆಲಸದ ಅವಧಿಗೆ ಓವರ್ ಟೈಂ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

    ಯಾವುದೇ ಸೇವಾ ಪರಿಸ್ಥಿತಿಗಳ ಬದಲಾವಣೆಯನ್ನು ಕಾರ್ಮಿಕ ಸಂಘಗಳ ಜತೆಗೆ ಚರ್ಚಿಸಿ ಉಭಯ ಪಕ್ಷಗಳಿಗೂ ಸಮ್ಮತವಾದ ಅಂಶವನ್ನು ಜಾರಿಗೊಳಿಸಬೇಕು. ಎಲ್ಲ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿಗೊಳಿಸಬೇಕು. ಕೈಗಾರಿಕೆ ಒಪ್ಪಂದದ ಪ್ರಕಾರ ಎಲ್ಲ ಕಾರ್ಮಿಕರಿಗೂ ಗ್ರಾೃಚುಟಿ ಪಾವತಿಸಬೇಕು. ರಾಜ್ಯ ಸರ್ಕಾರ ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಖಾಸಗಿಯವರಿಗೆ ವಹಿಸಲು ಉದ್ದೇಶಿಸಿರುವ ಮಾರ್ಗಗಳನ್ನು ಸಾರಿಗೆ ನಿಗಮಗಳಿಗೆ ಉಳಿಸಬೇಕು. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸುವುದನ್ನು ನಿಲ್ಲಿಸಬೇಕು. ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯವರೊಂದಿಗೆ ಮಾಡಿರುವ ಅಪಘಾತ ವಿಮೆಯ ವಾರ್ಷಿಕ ಪ್ರೀಮಿಯಂ ಅನ್ನು ಆಡಳಿತ ವರ್ಗ ಪೂರ್ಣವಾಗಿ ಕಟ್ಟಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ನಂಜುಂಡಯ್ಯ, ಡಿ.ಜಿ.ಪುಟ್ಟರಾಜು, ಮಲ್ಲೇಶ್, ಶಿವರಾಮೇಗೌಡ, ಎಚ್.ಬಿ.ಚಂದ್ರು, ಎ.ಎಸ್.ರವಿ, ಜಯಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts