More

    ಕೆಎಫ್​ಡಿಗಾಗಿ ಆಂಬುಲೆನ್ಸ್ ವ್ಯವಸ್ಥೆ

    ಸಿದ್ದಾಪುರ: ಮಂಗನ ಕಾಯಿಲೆ (ಕೆಎಫ್​ಡಿ)ಹೆಚ್ಚಾಗುತ್ತಿರುವುದರಿಂದ ಸಿದ್ದಾಪುರ ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್ ವ್ಯವಸ್ಥೆ ಇರುವ ಆಂಬುಲೇನ್ಸ್ ನೀಡುವುದಕ್ಕೆ ಹಾಗೂ ಅವಶ್ಯ ಇರುವ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನ ಕ್ಯಾದಗಿ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಂಗನ ಕಾಯಿಲೆ ಹಾಗೂ ಕರೊನಾ ವೈರಸ್ ನಿಯಂತ್ರಣದ ಸಭೆಯಲ್ಲಿ ಅವರು ಮಾತನಾಡಿದರು.

    ಜಾನುವಾರುಗಳಿಗೆ ಅಂಟಿರುವ ಉಣುಗನ್ನು ಸಾಯಿಸುವುದಕ್ಕೆ ಬೇಕಾಗುವ ಐವರ್ ವೆಕ್ಟಿನ್ ಔಷಧ ಪೂರೈಕೆಯನ್ನು ತಕ್ಷಣವೇ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇನೆ. ಚುಚ್ಚುಮದ್ದು ಪಡೆಯದೇ ಇದ್ದರವರು ಚುಚ್ಚು ಮದ್ದು ಪಡೆದುಕೊಳ್ಳಬೇಕು. ಡಿಎಂಪಿ ತೈಲ ಹಚ್ಚಿಕೊಂಡು ಕೆಲಸಕ್ಕೆ ತೆರಳಬೇಕು ಎಂದು ಸೂಚಿಸಿದರು.

    ಪಾಸ್ ದುರುಪಯೋಗವಾಗದಿರಲಿ: ದಿನಸಿ, ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವವರಿಗೆ, ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವವರಿಗೆ ಪಾಸ್ ನೀಡಲಾಗುತ್ತದೆ. ಪಾಸ್ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.

    ಯಾವುದೇ ರೋಗಿ ಅಂತರ್ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದರೆ ಅಂತವರಿಗೆ ಜಿಲ್ಲಾಧಿಕಾರಿಗಳು ಪಾಸ್ ನೀಡುತ್ತಾರೆ. ಈಗಾಗಲೇ ಮಣಿಪಾಲ್ ಆಸ್ಪತ್ರೆಗೆ ಹೋಗುವವರಿಗೆ ಉಡುಪಿ ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎನ್ನುವ ದೂರು ಕೇಳಿ ಬಂದಿತ್ತು. ಈಗಾಗಲೇ ಉಡುಪಿ ಜಿಲ್ಲಾಧಿಕಾರಿ ಹಾಗೂ ಅಲ್ಲಿಯ ಎಸ್​ಪಿ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೆ, ಸರ್ಕಾರದ ಮಟ್ಟದಲ್ಲಿಯೂ ಮಾತನಾಡಿದ್ದೇನೆ. ಯಾವುದೇ ಸಮಸ್ಯೆ ಇದ್ದರೆ ತಹಸೀಲ್ದಾರರ ಗಮನಕ್ಕೆ ತರಬೇಕು.

    ಹಾಲು ಉತ್ಪಾದಕರಿಗೆ ತೊಂದರೆ ಆಗದಂತೆ ಪ್ರತಿ ಸಂಘದ ಒಬ್ಬರಿಗೆ ಹಾಲು ಸಂಗ್ರಹಣೆ ಮಾಡಲು ಪೆಟ್ರೋಲ್ ನೀಡಲು ಅನುಮತಿ ನೀಡಲಾಗಿದೆ.

    ಯಾವುದೇ ಸಂದರ್ಭದಲ್ಲಿಯೂ ರೈತರು, ಕೃಷಿಕರು, ಕೂಲಿಕಾರರು, ಕಾರ್ವಿುಕರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ಸರ್ಕಾರ ಇದೆ.

    ಕರೊನಾ ತಡೆಯುವುದಕ್ಕೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಸೂಚನೆ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕೆಲಸಮಾಡಬೇಕಾಗುತ್ತದೆ ಎಂದು ಹೆಚ್ಚಾರ ಎಚ್ಚರಿಸಿದರು.

    ಕರೊನಾ ನಿಯಂತ್ರಣಕ್ಕಾಗಿ ಹಗಲು ರಾತ್ರಿ ವಿವಿಧ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಾರ್ಬಜನಿಕರು ಸಹಕರಿಸಬೇಕು. ಯಾವುದೇ ಹೊರ ತಾಲೂಕು, ಜಿಲ್ಲೆಯಿಂದ ಬಂದ ವ್ಯಕ್ತಿ ಊರಲ್ಲಿ ಕಂಡುಬಂದಲ್ಲಿ ತಕ್ಷಣ ತಾಲೂಕು ಆಡಳಿತಕ್ಕೆ ತಿಳಿಸುವಂತೆ ಸಚಿವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

    ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವಶ್ಯ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ನಾಗರಾಜ ನಾಯ್ಕ, ಗ್ರಾಪಂ ಅಧ್ಯಕ್ಷ ಎಸ್.ಆರ್.ನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ, ಎಸಿ ಡಾ.ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ ಮಂಜುಳಾ ಭಜಂತ್ರಿ,ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ, ತಾಪಂ ಇಒ ಪ್ರಶಾಂತರಾವ್, ತಾಪಂ ಸದಸ್ಯ ವಿವೇಕ ಹೆಗಡೆ ಇತರರಿದ್ದರು.

    ಉಣುಗು ನಾಶಕ ಸಿಂಪಡಣೆ: ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೋಗಿನಮಠದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆ ಹಾಗೂ ಹಲಗೇರಿ ಗ್ರಾಪಂ ಜೋಗಿನಮಠದ ಎಲ್ಲ ಮನೆಯ ಸುತ್ತ ಮುತ್ತ ಉಣುಗು ನಾಶಕ ಔಷಧವನ್ನು ಮಂಗಳವಾರ ಹಲಗೇರಿ ಗ್ರಾಪಂ ಸಿಬ್ಬಂದಿ ಸಿಂಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್. ಅಶೋಕ ಕುಮಾರ, ಗ್ರಾಪಂ ಪಿಡಿಒ ಶಿವಕುಮಾರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಕೊರ್ಲಕೈ ಹಾಗೂ ಹಲಗೇರಿ ಗ್ರಾಪಂ ವ್ಯಾಪ್ತಿಯ ಎಲ್ಲ ಊರಿನ ಮನೆಯ ಸುತ್ತಮುತ್ತ ಉಣುಗು ನಾಶಕ ಔಷಧವನ್ನು ಎರಡು ದಿನದಲ್ಲಿ ಸಿಂಪರಣೆ ಮಾಡಲಾಗವುದು ಎಂದು ಗ್ರಾಪಂ ಪಿಡಿಒ ಶಿವಕುಮಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts