More

    ಕೆಂಪು ವಲಯದಿಂದ ಕಿತ್ತಳೆಗೆ ಜಾರಿದ ಚಿಕ್ಕಬಳ್ಳಾಪುರ

    ಚಿಕ್ಕಬಳ್ಳಾಪುರ: ಕರೊನಾ ಸೋಂಕು ಪ್ರಕರಣಗಳ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಜಿಲ್ಲೆ ಕೆಂಪು ವಲಯದಿಂದ ಕಿತ್ತಳೆ ಬಣ್ಣದ ವಲಯಕ್ಕೆ ಬಂದಿದೆ.

    ಪತ್ತೆಯಾದ ಕರೊನಾ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳನ್ನು ಕೆಂಪು ವಲಯ, ಕಿತ್ತಳೆ ವಲಯ, ಹಸಿರು ವಲಯಗಳನ್ನು ಗುರುತಿಸಲಾಗುತ್ತಿದೆ. ಇದರ ನಡುವೆ ಮೊದಲ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕೆಂಪು ವಲಯದಲ್ಲಿತ್ತು. ಇದೀಗ ಪರಿಷ್ಕೃತ ಎರಡನೇ ಪಟ್ಟಿಯಲ್ಲಿ ಕಿತ್ತಳೆ ಬಣ್ಣದ ವಲಯಕ್ಕೆ ಸೇರಿದೆ.

    ಜಿಲ್ಲೆಯಲ್ಲಿ ಮಾರ್ಚ್‌ನಿಂದ ನಿರಂತರವಾಗಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿತು. ಮೊದಲು ಎಲ್ಲ ಪ್ರಕರಣಗಳು ಗೌರಿಬಿದನೂರು ನಗರದ ವ್ಯಾಪ್ತಿಗೆ ಸೇರಿದ್ದು ಇಲ್ಲಿ ಬರೋಬ್ಬರಿ 13 ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿನ 31 ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಿ, ಸೋಂಕು ಹರಡುವಿಕೆಗೆ ಕಡಿವಾಣ ಹಾಕಲಾಯಿತು. ಸೋಂಕಿತರು ಮತ್ತು ನೇರ ಸಂಪರ್ಕಗಳನ್ನು ಜಿಲ್ಲಾಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲಾಯಿತು.

    ಇದರ ನಡುವೆ ಚಿಕ್ಕಬಳ್ಳಾಪುರದಲ್ಲಿ 17ನೇ ವಾರ್ಡ್‌ನ ವೃದ್ಧನಿಂದ ಸೋಂಕು ಹರಡುವಿಕೆ ಪ್ರಾರಂಭವಾಗಿ, ಇದೀಗ 6 ಸೋಂಕಿತರನ್ನು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಎಲ್ಲ 31 ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಇಲ್ಲಿಯವರೆಗೂ ಜಿಲ್ಲೆಯಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆರು ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾದ ಸಂಗತಿ ಎಂದರೆ 11 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮೃತರು ಮತ್ತು ಗುಣಮುಖರಾದವರನ್ನು ಹೊರತುಪಡಿಸಿ, ಪ್ರಸ್ತುತ 6 ಸೋಂಕಿತರಿದ್ದು ಜಿಲ್ಲೆ ಕೆಂಪು ವಲಯದಿಂದ ಕಿತ್ತಳೆಗೆ ಜಾರಿದೆ.

    ಹೊಸ ಪ್ರಕರಣ ಪತ್ತೆ : ಚಿಕ್ಕಬಳ್ಳಾಪುರದ 17ನೇ ವಾರ್ಡ್ ಮಹಿಳೆಯೊಬ್ಬರಲ್ಲಿ (40 ವರ್ಷ) ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕರೊನಾ ಪೀಡಿತರ ಸಂಖ್ಯೆ 19ಕ್ಕೆ ಏರಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಮೃತಪಟ್ಟ ವೃದ್ಧನ ಕುಟುಂಬದವರೊಂದಿಗೆ ಮಹಿಳೆಯು ನೇರ ಸಂಪರ್ಕದಲ್ಲಿದ್ದರು. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಈ ನಡುವೆ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ.

    ವಾರ್ಡ್‌ನಲ್ಲಿ ಅಲರ್ಟ್ : ಹೊಸ ಸೋಂಕು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು 17ನೇ ವಾರ್ಡ್‌ನ ನೋಡಲ್ ಅಧಿಕಾರಿ, ಪೊಲೀಸರು ಮತ್ತು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸೋಂಕಿತ ಮಹಿಳೆಯೊಂದಿಗೆ ನೇರ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿಗಳನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಇನ್ನು ಕುಟುಂಬದಲ್ಲಿ 12 ಸದಸ್ಯರಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts