More

    ಕೃಷಿ ಭೂಮಿಗೆ ಕೊಳಚೆ ನೀರು

    ಶಿರಸಿ: ರಾಜಕಾಲುವೆಯನ್ನು ವೈಜ್ಞಾನಿಕವಾಗಿ ನಿರ್ವಿುಸಿಲ್ಲ. ಅಲ್ಲದೆ, ನಗರ ತ್ಯಾಜ್ಯವನ್ನು ಕಚ್ಚಾ ಗಟಾರದಲ್ಲಿ ಬಿಡುತ್ತಿರುವ ಕಾರಣ ಮಳೆಗಾಲದಲ್ಲಿ ಇಲ್ಲಿನ ಗೊಲಗೇರಿ ಭಾಗದ ನೂರಾರು ಎಕರೆ ಕೃಷಿ ಭೂಮಿ ಕೊಳಚೆ ನೀರಲ್ಲಿ ಮುಳುಗುತ್ತಿದೆ.

    ನಗರದ ಹೊರವಲಯದ ಗೊಲಗೇರಿ ಭಾಗದಲ್ಲಿ ಅಂದಾಜು 70 ಕೃಷಿಕರ 150 ಎಕರೆ ಕೃಷಿ ಜಮೀನಿದೆ. ಸಮೃದ್ಧ ಫಸಲು ನೀಡುತ್ತಿದ್ದ ಭೂಮಿ ದಶಕದಿಂಚೇಗೆ ಫಲವತ್ತತೆ ಕಳೆದುಕೊಂಡಿದೆ. ಈ ಜಮೀನುಗಳಲ್ಲಿ ಕೆಲಸ ಮಾಡಲು ಕೂಲಿಗಳು ಈಗ ಮುಂದೆ ಬರುತ್ತಿಲ್ಲ. ಒಂದೊಮ್ಮೆ ಇಲ್ಲಿ ಕೆಲಸ ಮಾಡಿದರೂ ಚರ್ಮ ರೋಗದಂಥ ವ್ಯಾಧಿ ಬಾಧಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಜಮೀನು ಮಧ್ಯ ಭಾಗದಲ್ಲಿ ನಗರದ ತ್ಯಾಜ್ಯ ಹೊತ್ತು ಸಾಗುವ ಬೃಹತ್ ಪ್ರಮಾಣದ ಕಚ್ಚಾ ಗಟಾರ ಇರುವುದು.

    ಮಳೆಗಾಲದಲ್ಲಿ ಕೊಳಚೆ: ಇಲ್ಲಿ ಮಳೆಯಾಶ್ರಿತ ಭತ್ತ ಬೆಳೆಯಲಾಗುತ್ತದೆ. ಮಳೆ ಆರಂಭದ ನಂತರ ಕೃಷಿ ಚಟುವಟಿಕೆ ಬಿರುಸು ಪಡೆಯುತ್ತದೆ. ಆದರೆ, ಇದೇ ಸಮಯದಲ್ಲಿ ಸಮಸ್ಯೆ ಕೂಡ ಶುರುವಾಗುತ್ತದೆ. ನಗರದಿಂದ ಹರಿದು ಬರುವ ಮಳೆಯ ನೀರು, ಮಲಿನ ನೀರು ಗ್ರಾಮೀಣ ಭಾಗದಿಂದ ಮುಂದೆ ಹರಿದು ಹೋಗುವಂತೆ ರಾಜಕಾಲುವೆ ಮಾಡಲಾಗಿದೆ. ಆದರೆ, ರಾಜಕಾಲುವೆ ಇಲ್ಲಿನ ಭತ್ತ ಸಂಶೋಧನಾ ಕೇಂದ್ರದ ಹಿಂಭಾಗದವರೆಗಷ್ಟೇ ಮಾಡಲಾಗಿದೆ. ಅದರ ಮುಂದೆ ಕಚ್ಚಾ ಗಟಾರ ಹಾಗೆಯೇ ಉಳಿದಿದೆ. ಅದು ಕೂಡ ನಿರ್ವಹಣೆಯಿಲ್ಲದೆ ನೀರು ಹರಿದು ಹೋಗದ ಸ್ಥಿತಿ ಇದೆ. ಮಳೆಗಾಲದುದ್ದಕ್ಕೂ ತುಂಬಿ ಹರಿಯುವ ಈ ಕಚ್ಚಾ ಗಟಾರದ ತ್ಯಾಜ್ಯ ಮಿಶ್ರಿತ ನೀರು ಗದ್ದೆಗೆ ಬಂದು ಕೃಷಿ ಕಾಯಕ ಮಾಡದಂತೆ ತಡೆಯೊಡ್ಡುತ್ತದೆ. ನಗರದ ಸಂಪೂರ್ಣ ತ್ಯಾಜ್ಯ ಈ ಮಾರ್ಗದಲ್ಲಿಯೇ ಸಾಗುವ ಕಾರಣ ಪ್ಲಾಸ್ಟಿಕ್, ಬಾಟಲಿ, ಮನೆಗಳ ತ್ಯಾಜ್ಯ, ಮಾಂಸ ತ್ಯಾಜ್ಯ, ಇ- ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಸೇರಿ ಎಲ್ಲ ಬಗೆಯ ತ್ಯಾಜ್ಯ ಗದ್ದೆಗೆ ಸೇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಜಮೀನು ಬಹುತೇಕ ಮುಳುಗಡೆಯಾಗಿರುತ್ತದೆ. ಹೀಗಾಗಿ, ಇಲ್ಲಿ ಕಾರ್ಯ ಮಾಡುವ ಕೃಷಿಕರು ಚರ್ಮರೋಗಕ್ಕೆ ತುತ್ತಾದ ಉದಾಹರಣೆಗಳು ಸಾಕಷ್ಟಿವೆ.

    ಗೊಲಗೇರಿ ಭಾಗದ ಕೃಷಿ ಜಮೀನಿಗೆ ನಗರ ತ್ಯಾಜ್ಯ ಸೇರ್ಪಡೆ ಆಗುವ ಸಮಸ್ಯೆ ಗಳನ್ನು ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇರುವ ಜಮೀನಿನಲ್ಲಿ ಕೃಷಿ ಮಾಡದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲದಂಥ ಪರಿಸ್ಥಿತಿ ನಮ್ಮದು. ಹಾಗಾಗಿ ಈ ಭಾಗದ ಕೃಷಿಕರು ಸೇರಿ ಸಾಧ್ಯವಾದಷ್ಟು ಮಟ್ಟಿಗೆ ತ್ಯಾಜ್ಯ ತೆಗೆದಿದ್ದೇವೆ. ಆದರೆ, ನಿರಂತರವಾಗಿ ತ್ಯಾಜ್ಯ ಬರುವ ಕಾರಣ ನಾವು ಮಾಡಿದ ಶ್ರಮ ವ್ಯರ್ಥ ಆಗುತ್ತದೆ. ಮಳೆಗಾಲಪೂರ್ವದಲ್ಲಿ ಕಾಲುವೆ ಸ್ವಚ್ಛಗೊಳಿಸಿ ಜಮೀನು ಉಳಿಸಿಕೊಡಬೇಕು. ಕಚ್ಚಾ ರಾಜಕಾಲುವೆ ಬದಲಿಗೆ ಸಂಪೂರ್ಣವಾಗಿ ಪಕ್ಕಾ ಕಾಂಕ್ರೀಟ್ ರಾಜಕಾಲುವೆ ನಿರ್ವಿುಸಬೇಕು ಎಂದು ಸ್ಥಳೀಯರಾದ ಮಧುಕರ ಆರ್., ರವೀಂದ್ರ ಜಿ., ಇತರರು ಆಗ್ರಹಿಸಿದ್ದಾರೆ.

    ದಶಕಗಳಿಂದ ಈ ಸಮಸ್ಯೆಯಿದೆ. ಈ ಬಾರಿ ನಗರೋತ್ಥಾನ ಯೋಜನೆಯಡಿ ಚರಂಡಿ ಕಾಮಗಾರಿ ಮಾಡಲು ಮಂಜೂರಾತಿ ನೀಡಲಾಗಿದೆ. ತಾತ್ಕಾಲಿಕವಾಗಿ ಈಗ ಸ್ವಚ್ಛಗೊಳಿಸಿ, ಮಳೆಗಾಲ ನಂತರ ಪಕ್ಕಾ ಗಟಾರ ನಿರ್ವಿುಸಲು ಕ್ರಮ ವಹಿಸಲಾಗುವುದು.
    ಗಣಪತಿ ನಾಯ್ಕ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts