More

    ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆಗೆ ಆಕ್ರೋಶ; ರೈತ ಸಂಘದಿಂದ ಪ್ರತಿಭಟನೆ

    ಸಾಗರ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ರಾಜ್ಯ ಸರ್ಕಾರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿ ಕಂಪನಿಗಳಿಗೆ ವಹಿಸಲು ಮುಂದಾಗಿದೆ. ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಿದ್ದರು. ಜತೆಗೆ ವಿವಿಧ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಈಗ ಅವೆಲ್ಲವನ್ನೂ ತೆಗೆದು ಹಾಕಿ, ಸ್ಮಾರ್ಟ್ ಮೀಟರ್ ಅಳವಡಿಸುವ ಆಲೋಚನೆ ಮಾಡುತ್ತಿದೆ. ಹಾಗೇನಾದರೂ ಮಾಡಿದರೆ ಮೀಟರ್‌ಗಳನ್ನು ಕಿತ್ತು ಎಸೆಯುವ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕು. ನೆರೆ ಹಾವಳಿಯಿಂದ ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಕೇಂದ್ರ ಸರ್ಕಾರವು ಭೂತಾನ್ ಇನ್ನಿತರೆ ದೇಶಗಳಿಂದ ಹಸಿ ಅಡಕೆ ಆಮದು ಮಾಡಿಕೊಳ್ಳಲು ಮುಂದಾಗಿರುವುದನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
    ಆಪ್ಸ್‌ಕೋಸ್ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಮಾತನಾಡಿ, ಸರ್ಕಾರ ರೈತರು ಉಪಯೋಗಿಸುತ್ತಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ಮೀಟರ್ ಅಳವಡಿಸುವುದನ್ನು ನಿಲ್ಲಿಸಿ ಹಿಂದಿನಂತೆ ಮುಂದುವರೆಸಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು. ಭೂತಾನ್‌ನಿಂದ ಹಸಿಅಡಿಕೆ ಆಮದು ಮಾಡಿಕೊಳ್ಳುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ.ಹಸಿ ಅಡಿಕೆಯನ್ನು ವಿದೇಶದಿಂದ ಇಲ್ಲಿ ತಂದು ಮಾರಲು ಸಾಧ್ಯವಾಗುವುದಿಲ್ಲ ಮತ್ತು ಅದರ ಗುಣಮಟ್ಟವನ್ನು ಕಾಪಾಡುವುದು ಕಷ್ಟಕರ, ಹಸಿ ಅಡಿಕೆ ಆಮದು ಮಾಡಿಕೊಳ್ಳುತ್ತೇವೆ ಎನ್ನುವ ಕುಂಟು ನೆಪ ಹೇಳಿ ಒಣ ಅಡಿಕೆಯನ್ನೇ ತಂದು ಮಾರುವ ಹುನ್ನಾರವನ್ನು ಕೇಂದ್ರಸರ್ಕಾರ ಮಾಡುತ್ತದೆ ಎನ್ನುವ ಎಚ್ಚರ ನಮಗಿರಬೇಕು. ಕೇಂದ್ರ ಸರ್ಕಾರ ಒಂದು ಕಡೆ ಅಡಿಕೆ ಹಾನಿಕಾರಕ ಎನ್ನುತ್ತದೆ. ಇನ್ನೊಂದು ಕಡೆ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಸರ್ಕಾರದ ಈ ನಿರ್ಧಾರವೇ ಅನುಮಾನಾಸ್ಪದವಾಗಿದೆ. ತಕ್ಷಣ ಅಡಿಕೆ ಆಮದು ನಿಲ್ಲಿಸಬೇಕು ಇಲ್ಲವಾದರೆ ಅಡಿಕೆ ಬೆಳೆಗಾರರಿಗೆ ಇದು ಮರಣಶಾಸನವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts