More

    ಕೃಷಿ ತಂತ್ರಜ್ಞಾನ ಗ್ರಾಮೀಣ ಭಾಗಕ್ಕೂ ವಿಸ್ತರಣೆ

    • ಕೊಡಗು : ಸಾಮಾನ್ಯ ಸೇವಾ ಕೇಂದ್ರದ ಮೂಲಕ ಕೃಷಿ ತಂತ್ರಜ್ಞಾನವನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದು ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್(ಕೃಷಿ ವಿಸ್ತರಣಾ) ಉಪ ಮಹಾನಿರ್ದೇಶಕ ಉದಮ್ ಸಿಂಗ್ ಗೌತಮ್ ಮಾಹಿತಿ ನೀಡಿದರು.
    • ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬೆಂಗಳೂರು ಕೃಷಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಬೆಂಗಳೂರು ಜಿಕೆವಿಕೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸೇವಾ ಕೇಂದ್ರದ ಮೂಲಕ ರೈತ ಉತ್ಪಾದಕ ಸಂಸ್ಥೆ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    • ಗ್ರಾಮೀಣ ಭಾಗಕ್ಕೂ ಕೃಷಿ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸುವುದು ಕೇಂದ್ರದ ಗುರಿಯಾಗಿದ್ದು, ರೈತ ಉತ್ಪಾದಕ ಸಂಸ್ಥೆ ಮೂಲಕ ಯೋಜನೆ ಮುಂದುವರಿಸಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರದ (ಸಿಎಸ್‌ಸಿ) ಮೂಲಕ ಸಾಕಷ್ಟು ಸರ್ಕಾರದ ಯೋಜನೆಗಳು ಹಾಗೂ ಕೃಷಿ ತಂತ್ರಜ್ಞಾನ ಗ್ರಾಮೀಣ ಜನತೆಗೆ ದೊರೆಯುವಂತಾಗಿದೆ. ಕೃಷಿ ಪ್ರೋತ್ಸಾಹಕ್ಕೆ ಜಾರಿಗೆ ತಂದಿರುವ ಬಹುತೇಕ ಸ್ವ-ಸಹಾಯ ಗುಂಪುಗಳು ಈಗ ಉಳಿದುಕೊಂಡಿಲ್ಲ.
    • ಇದರಿಂದಾಗಿ ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತ ಉತ್ಪಾದಕ ಸಂಸ್ಥೆ ರಚಿಸಿಕೊಂಡು ರೈತನ ಆದಾಯ ದುಪ್ಪಟ್ಟು ಮಾಡುವ ಕಾರ್ಯಯೋಜನೆ ಫಲ ನೀಡುತ್ತಿದೆ. ಲಾಭ ಹೆಚ್ಚಿಸಿಕೊಳ್ಳಲು ಪೂರಕ ಪ್ರೋತ್ಸಾಹ ಕೂಡ ನೀಡಲಾಗುತ್ತಿದೆ. ಬೆಳೆದಿರುವ ಬೆಳೆಯನ್ನು ಎಫ್‌ಪಿಒ ಮೂಲಕ ಖರೀದಿಸಿ ಮೌಲ್ಯವರ್ಧನೆಯೊಂದಿಗೆ ಮಾರುಕಟ್ಟೆ ಕಂಡುಕೊಳ್ಳುವುದು ಲಾಭದಾಯಕ ಎಂಬುದು ಈಗ ಎಲ್ಲರಿಗೂ ಅರಿವಾಗಿದೆ. ಈ ನಿಟ್ಟಿನಲ್ಲಿ ಸಿಎಸ್‌ಸಿ ಮೂಲಕ ಸಾಮಾನ್ಯ ರೈತನಿಗೂ ಪ್ರೋತ್ಸಾಹ ದೊರೆಯುವಂತಾಗಿದೆ. ಹಸು, ಮೇಕೆ, ಕೋಳಿ ಸಾಕಣೆ, ಅಣಬೆ ಬೇಸಾಯದ ಮೂಲಕ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ದೇಶದಲ್ಲಿ ಕೃಷಿ ಅಭಿವೃದ್ಧಿಗೆ ಪೂರಕ ಪ್ರೋತ್ಸಾಹವಿದ್ದು, ನೂತನ ತಂತ್ರಜ್ಞಾನ ಮಾಹಿತಿ ನೀಡುತ್ತಿರುವ ಕೆವಿಕೆ ತಂತ್ರಜ್ಞಾನವು ಬೇರೆ ದೇಶಗಳಿಗೂ ಮಾದರಿಯಾಗಿದೆ. ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಸಾಕಷ್ಟು ದೇಶಗಳು ಉತ್ಸುಕತೆ ತೋರಿದೆ ಎಂದು ವಿವರಿಸಿದರು.

    • ಭಾರತೀಯ ಅನುಸಂಧಾನ ಪರಿಷತ್(ಕೃಷಿ ವಿಸ್ತರಣಾ) ಸಹಾಯಕ ಮಹಾನಿರ್ದೇಶಕ ಡಾ.ರಾಜಶ್ರೀ ರಾಯ್ ಮುರ್ಮನ್ ಮಾತನಾಡಿ, ಸಣ್ಣ ಬೆಳೆಗಾರನ ಆರ್ಥಿಕ ಸುಧಾರಣೆ, ಆದಾಯ ಹೆಚ್ಚಿಸುವುದು, ಇಳುವರಿ ಕಾಪಾಡಿಕೊಳ್ಳುವುದು ಇಂದಿನ ದೊಡ್ಡ ಸವಾಲಾಗಿದ್ದು, ರೈತ ಉತ್ಪಾದಕಾ ಸಂಸ್ಥೆ ಮೂಲಕ ಪ್ರಯೋಜನ ಕಂಡುಕೊಳ್ಳಲು ರೈತರು ಮುಂದೆ ಬರಬೇಕಿದೆ. ಬೇಸಾಯ, ಗುಣಮಟ್ಟದ ಬೆಳೆ ಉತ್ಪಾದನೆ, ತಮ್ಮದೇ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಿದೆ. 300 ರೈತರ ತಂಡ ರಚಿಸಿಕೊಂಡು ಕೃಷಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಭಾಗವಹಿಸಿದ್ದರು. ಪುತ್ತರಿ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕಿ ಸುನಿತಾ ಅಪ್ಪಣ್ಣ, ಸಿಇಒ ಹೊಟ್ಟೇಂಗಡ ಪೊನ್ನಣ್ಣ ಅವರನ್ನು ಎಫ್‌ಪಿಒ ನಿರ್ವಹಣೆ ಹಿನ್ನೆಲೆ ಅಭಿನಂದಿಸಲಾಯಿತು. ಕೃಷಿ ತಂತ್ರಜ್ಞಾನ ಅಳವಡಿಕ ಸಂಶೋಧನಾ ಸಂಸ್ಥೆಯ ವಲಯ 11ರ ನಿರ್ದೇಶಕ ಡಾ.ವೆಂಕಟಸುಬ್ರಮಣಿಯನ್, ಕೆವಿಕೆ ನೋಡೆಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ್ ಹಂಜಿ, ಕೆವಿಕೆ ಪ್ರಭಾರ ಮುಖ್ಯಸ್ಥ ಡಾ.ಕಾಡ್ಯಮಾಡ ಎ ದೇವಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts